ಚಿನ್ನಕ್ಕೆ ಚಿನ್ನದಂಥ ಬೆಲೆ . . . . . (ಉದಯವಾಣಿ)

Image

 

‘ಚಿನ್ನದ ಗೊಂದಲ ಮತ್ತು ಭವಿಷ್ಯ’

ಮಹಿಳೆಯರಿಗೆ ಅತ್ಯಂತ ಆಪ್ಯಾಯಮಾನವಾದ ಒಂದು ವಿಚಾರವೆಂದರೆ ಅದು ಚಿನ್ನ. ಮಹಿಳೆಯರ ಈ ಸೆಳೆತವನ್ನು ಪುರುಷರು ಪಬ್ಲಿಕ್ ಆಗಿ ಎಷ್ಟು ತಮಾಷೆ ಮಾಡಿದರೂ ಆಂತರ್ಯದಲ್ಲಿ ಅವರೂ ಸ್ವರ್ಣಪ್ರಿಯರೇ. ಯಾಕೆಂದರೆ ಭೂಮಿಯಂತೆಯೇ ಚಿನ್ನವೂ ಒಂದು ಉತ್ತಮ ಹೂಡಿಕೆಯ ಹಾದಿ ಎನ್ನುವುದರಲ್ಲಿ ಈಗ ಯಾರಿಗೂ ಸಂಶಯ ಉಳಿದಿಲ್ಲ.

ಕಳೆದ ಕೆಲ ತಿಂಗಳುಗಳಿಂದ ಚಿನ್ನದ ಮಾರುಕಟ್ಟೆಯಲ್ಲಿ ಹಲವಾರು ಗೊಂದಲಗಳು ತಲೆದೋರಿವೆ. ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತದ ಜೊತೆ ಜೊತೆಗೇ ಜೊತೆಗೆ ಸರಕಾರದ ವತಿಯಿಂದ ದಿನಕ್ಕೊಂದು ಹೊಸ ಕಾನೂನು. ಚಿನ್ನ ಕೊಳ್ಳಬಹುದೇ? ಅಥವಾ ಕೊಂಡರೆ ಯಾವಾಗ ಕೊಳ್ಳಬೇಕು ಎನ್ನುವುದೇ ತಿಳಿಯುವುದಿಲ್ಲ.

ಸುಮಾರು ಹತ್ತು ವರ್ಷಕ್ಕೂ ಮೀರಿ ವಾರ್ಷಿಕ ೨೦% ಗಿಂತಲೂ ಜಾಸ್ತಿ ಪ್ರತಿಫಲ ನೀಡುತ್ತಿದ್ದ ಚಿನ್ನ ಇದ್ದಕ್ಕಿದ್ದಂತೆ ೨೦೧೨ ರಲ್ಲಿ ಸುಮಾರು ೧೦% ಕ್ಕೆ ಇಳಿದ ಚಿನ್ನದ ಪ್ರತಿಫಲ, ೨೦೧೩ ರಲ್ಲಂತೂ ಈವರೆಗೆ ಮೈನಸ್ ೧೦% ಪ್ರತಿಫಲ ದಾಖಲಿಸಿದೆ. ಏರಿಳಿಯುತ್ತಿರುವ ಚಿನ್ನದ ಬೆಲೆ ಜನರ ಸಂಪತ್ತಿನ ಮೌಲ್ಯವನ್ನು ಕರಗಿಸುವುದು ಒಂದೆಡೆಯಾದರೆ ಅದೇ ಇಳಿಯುತ್ತಿರುವ ಬೆಲೆಯನ್ನು ಕಂಡು ಬಾಯಲ್ಲಿ ನೀರೂರಿಸಿಕೊಂಡು ಚಿನ್ನ ಖರೀದಿಸಲು ಇನ್ನೊಂದೆಡೆ ಜನ ಮುಗಿಬೀಳತೊಡಗಿದ್ದಾರೆ.
ಆದರೆ ಅಷ್ಟರಲ್ಲಿಯೇ ಸರಕಾರವು ನಾನಾವಿಧಗಳಲ್ಲಿ ಚಿನ್ನದ ವಹಿವಾಟಿನ ಮೇಲೆ ಎಲ್ಲೆಡೆ ಕಡಿವಾಣ ಹಾಕತೊಡಗಿದೆ. ಆಮದು ಸುಂಕದಲ್ಲಿ ಹೆಚ್ಚಳ, ಚಿನ್ನದ ಮೇಲೆ ಸಾಲಕ್ಕೆ ಕಡಿವಾಣ, ಚಿನ್ನದ ನಾಣ್ಯ ಮತ್ತು ಬಾರ್ ಖರೀದಿ ರದ್ಧು, ವಿತ್ತ ಮಂತ್ರಿಗಳು ಜನರಲ್ಲಿ ಚಿನ್ನ ಖರೀದಿ ಮಾಡಬಾರದೆಂಬ ಮನವಿ ಇವೆಲ್ಲಾ ಚಿನ್ನಾಸಕ್ತ ಗ್ರಾಹಕರ ತಲೆಯಲ್ಲಿ ಗೊಂದಲವನ್ನು ಮೂಡಿಸಿವೆ.

ನಿಜವಾಗಿ ನಡೆಯುತ್ತಿರುವುದಾದರೂ ಏನು?

ಇಲ್ಲಿ ಒಂದಕ್ಕೊಂದು ಸಂಬಂಧಪಟ್ಟಂತೆ ಎರಡು ವಿಚಾರಗಳಿವೆ. ಎರಡನ್ನೂ ಸರಿಯಾಗಿ ಅರ್ಥ ಮಾಡಿಕೊಂಡರೆ ಚಿನ್ನದ ಬಗ್ಗೆ ಸಮಗ್ರವಾದ ಚಿತ್ರಣ ಸಿಗುತ್ತದೆ. ಚಿನ್ನದಲ್ಲಿ ಹೂಡಿಕೆ ಮಾಡುವುದು ಮೊದಲನೆಯ ವಿಚಾರವಾದರೆ ಚಿನ್ನದ ಆಮದಿನಿಂದ ದೇಶದಲ್ಲಿ ಉಂಟಾಗುವ ಆರ್ಥಿಕ ಸಮಸ್ಯೆಗಳು ಮತ್ತದಕ್ಕೆ ಸರಕಾರ ತೆಗೆದುಕೊಂಡ ಕ್ರಮಗಳು ಎರಡನೆಯ ವಿಚಾರ.

ಚಿನ್ನದಲ್ಲಿ ಹೂಡಿಕೆ:

ಒಂದು ಆರ್ಥಿಕತೆಯಲ್ಲಿ ಎಲ್ಲದಕ್ಕೂ ಕೇಂದ್ರಬಿಂದು ಪ್ರಗತಿ – ಒಂದು ಕಾರ್ಖಾನೆ/ಕೃಷಿ ಭೂಮಿ/ಸೇವಾ ಕ್ಷೇತ್ರದಲ್ಲಿ ನಡೆಯುವ ಮೌಲ್ಯ ವರ್ಧನೆಯೇ (Value addition) ಎಲ್ಲದಕ್ಕೂ ಮೂಲ. ಬೇರೆಲ್ಲಾ ಆರ್ಥಿಕ ಚಟುವಟಿಕೆಗಳೂ ಇದರ ಸುತ್ತಲೂ ಬೆಳೆಯುತ್ತವೆ.

ಆರ್ಥಿಕ ಪ್ರಗತಿ ದರ ಮೊದಲಿಗಿಂತ ಜಾಸ್ತಿಯಾಗುತ್ತದೆ ಎಂದಾದರೆ ಅದಕ್ಕೆ ತಳಕುಹಾಕಿಕೊಂಡ ಕಚ್ಚಾವಸ್ತು, ಇಂಧನ, ಬಂಡವಾಳ ಎಲ್ಲದರ ಬೇಡಿಕೆಗಳೂ ಏರುತ್ತವೆ. ಸಂಬಂದಪಟ್ಟಂತೆ ಕಮಾಡಿಟಿ, ಕ್ರೂಡ್ ಆಯಿಲ್, ಬೇಸ್ ಮೆಟಲ್ಸ್, ಬಡ್ಡಿ ದರ, ಶೇರುಗಳು, ಅಲ್ಲದೆ ಕರೆನ್ಸಿ ಮೌಲ್ಯ- ಇವೆಲ್ಲವೂ ಏರುತ್ತವೆ. ಅದೇ ರಿವರ್ಸ್ ಹೊಡೆದು ಪ್ರಗತಿ ಕುಂಠಿತವಾದಾಗ ಇವೆಲ್ಲಾ ಕುಸಿಯುತ್ತವೆ. ಆಗ ಕೈಯಲ್ಲಿ ಇದ್ದ ಹಣವನ್ನು ಎಲ್ಲಿ ಹೂಡುವುದು ಎಂಬ ಪ್ರಶ್ನೆ ಬರುತ್ತದೆ. ಆರ್ಥಿಕತೆಗೆ ಸಂಬಂಧಪಟ್ಟ ಯಾವುದರಲ್ಲಿ ಹೂಡಿದರೂ ಸುಖವಿಲ್ಲ. ನಾಳೆಗೆ ಇನ್ನಷ್ಟೂ ಇಳಿದೀತು ಎಂಬ ಭಯ. ಅಂತಹ ಸಂದರ್ಭಗಳಲ್ಲಿ ಇದ್ದ ದುಡ್ಡನ್ನು ಆರ್ಥಿಕತೆಗೆ ಸಂಬಂಧಪಡದ ಯಾವುದಾದರೂ ಒಂದು ವಸ್ತುವಿನಲ್ಲಿ ಕೂಡಿಡುವುದೇ ಜಾಣತನ. ಈ ಜಾಣತನದ ಹೆಸರು ‘ಹೆಜ್ಜಿಂಗ್’.

Hedge ಎಂದರೆ ಬೇಲಿ. ಕುಸಿಯುತ್ತಿರುವ ಹೂಡಿಕೆಗೆ ಇನ್ನೊಂದು ಕುಸಿಯದ ಕಡೆಯಲ್ಲಿ ಹೂಡಿ ಬೇಲಿಕಟ್ಟಿ ಭದ್ರಪಡಿಸುವ ಈ ತಂತ್ರಕ್ಕೆ ಹೆಜ್ಜಿಂಗ್ ಎನ್ನುತ್ತಾರೆ. ಇಂತಹ ಕಾಲದಲ್ಲಿ ಎಲ್ಲರಿಗೂ ನೆನಪಾಗುವುದು ಚಿನ್ನ! ಇದುವೇ ವಿಶ್ವದ ಆಪದ್ಧನ! ಇದ್ದ ಹಣವನ್ನು ಚಿನ್ನದಲ್ಲಿ ಹಾಕಿ ಇಟ್ಟರೆ ಅದು ಸೇಫ್ ಎಂಬ ನಂಬಿಕೆ. ಹಾಗಾಗಿ ಕಳೆದ ಕೆಲ ವರ್ಷಗಳ ಆರ್ಥಿಕ ಹಿಂಜರಿತದ ಕಾಲದಲ್ಲಿ ಚಿನ್ನದ ಬೆಲೆ ಏರಿತು.

ಮತ್ತೆ ಇದೀಗ ಅಮೇರಿಕಾದಲ್ಲಿ ಆರ್ಥಿಕ ಸುಧಾರಣೆಯ ಲಕ್ಷಣಗಳು ಕಾಣಿಸಿದ ಕೂಡಲೇ ಚಿನ್ನದ ಹೂಡಿಕೆ ವಾಪಾಸು ಆರ್ಥಿಕತೆಯತ್ತ ಓಡುತ್ತಿದೆ. ಚಿನ್ನದ ಬೆಲೆ ಇಳಿಯತೊಡಗಿದೆ. ಇದು ಒಂದು ಮಾರುಕಟ್ಟೆಯ ಸಹಜ ಪ್ರತಿಕ್ರಿಯೆ.

ಚಿನ್ನದ ಬೆಲೆ ನಿರ್ಣಯ ಹೇಗೆ?

ಚಿನ್ನದ ಬೆಲೆ ಮೂಲತಃ ಅಮೆರಿಕಾ ಮಾರುಕಟ್ಟೆಯಲ್ಲಿಯೇ ನಿಗದಿಯಾಗುತ್ತದೆ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಬುಲಿಯನ್ ಚಿನ್ನದ ಬೆಲೆ, ಇಂತಿಷ್ಟು ‘ಡಾಲರ್ ಪ್ರತಿ ಔನ್ಸ್’ ಗೆ ಎಂದು ನಿಗಧಿಯಾಗುತ್ತದೆ. ಅ ಬೆಲೆಯನ್ನು ‘ರೂಪಾಯಿ ಪ್ರತಿ ಗ್ರಾಮ್’ ಗೆ ಮಾಡಲು ಪ್ರಚಲಿತ ವಿನಿಮಯ ದರದಿಂದ ಗುಣಿಸಿ, ೩೧.೧೦೩೪೭೬೮ ನಿಂದ ಭಾಗಿಸಬೇಕು. ಇದರ ಮೇಲೆ ಆಮದು ಸುಂಕ (ಸದ್ಯಕ್ಕೆ ೧೦%) ಮತ್ತಿತರ ಖರ್ಚುವೆಚ್ಚ ಲಾಭಾಂಶಗಳನ್ನು ಸೇರಿಸಬೇಕು. ಭಾರತದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಈ ರೀತಿ ನಿರ್ಣಯವಾಗುತ್ತದೆ. ಹಾಗಾಗಿ ಈ ರೂಪಾಯಿ ದರದ ಭಾರತೀಯ ಚಿನ್ನದ ಬೆಲೆ ಅಂತರಾಷ್ಟ್ರೀಯ ಚಿನ್ನದ ಡಾಲರ್ ದರವಲ್ಲದೆ ಡಾಲರ್-ರುಪಿ ವಿನಿಮಯ ದರದಿಂದ ಕೂಡಾ ಬಹಳವಾಗಿ ಪ್ರಭಾವಿತವಾಗುತ್ತದೆ.

ಚಿನ್ನದ ಆಮದು ಮತ್ತು ಆರ್ಥಿಕತೆ:

ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಕುಸಿತವಾದ ಕೂದಲೇ ಭಾರತ ಸಹಿತ ಜಗತ್ತಿನಾದ್ಯಂತ ಚಿನ್ನದ ಖರೀದಿ ಬಿರುಸುಕೊಂಡಿತು. ಸುಲಭದರದಲ್ಲಿ ಸಿಗುವ ಹಳದಿ ಲೋಹದ ಖರೀದಿಗೆ ಎಲ್ಲರೂ ಮುಗಿಬೀಳತೊಡಗಿದರು. ಭಾರತ ನೂರಕ್ಕೆ ನೂರು ಶತಮಾನ ಆಮದು ಚಿನ್ನವನ್ನು ಅವಲಂಭಿತವಾದ ರಾಷ್ಟ್ರ. ಹಾಗಾಗಿ ಈ ಬಿರುಸಿನ ಖರೀದಿ ದೇಶಕ್ಕೆ ತನ್ನದೇ ಆದ ಸಮಸ್ಯೆಗಳನ್ನು ಹುಟ್ಟುಹಾಕಿದೆ.

ಭಾರತ ತನ್ನ ಹೊರ ದೇಶಗಳೊಡನೆ ನಡೆಸುವ ವಿದೇಶಿ ವ್ಯವಹಾರಗಳ ಖಾತೆಯನ್ನು ಎರಡು ರೀತಿಯಾಗಿ ವಿಂಗಡಿಸಿದ್ದಾರೆ. ಕ್ಯಾಪಿಟಲ್ ಅಕೌಂಟ್ (ಬಂಡವಾಳ ಖಾತೆ) ಹಾಗೂ ಕರೆಂಟ್ ಅಕೌಂಟ್ (ಚಾಲ್ತಿ ಖಾತೆ). ದೇಶಕ್ಕೆ ಬರುವ ಮತ್ತು ಹೋಗುವ ದುಡ್ಡು ಸಂದರ್ಭಾನುಸಾರ ಈ ಎರಡು ರೀತಿಯ ಖಾತೆಗಳ ಮೂಲಕವೇ ಒಳ/ಹೊರ ಹರಿಯಬೇಕು. ಹೂಡಿಕೆಗಾದರೆ ಕ್ಯಾಪಿಟಲ್ ಖಾತೆ ಮತ್ತು ಇನ್ನಿತರ ವ್ಯವಹಾರಕ್ಕಾದರೆ ಚಾಲ್ತಿ ಖಾತೆ.

ಇಲ್ಲಿ ಮುಖ್ಯವಾದ ವಿಚಾರವೇನೆಂದರೆ ದೇಶದ ಒಳ ಬರುವ ಡಾಲರ್ ಅಥವ ಇತರ ಯಾವುದೇ ವಿದೇಶಿ ಕರೆನ್ಸಿ ಈ ಖಾತೆಗಳಿಗೆ ಬಿದ್ದ ಕೂಡಲೇ ರುಪಾಯಿಯಾಗಿ ಬದಲಾಗಿಯೇ ನಮ್ಮ ಬ್ಯಾಂಕ್ ಖಾತೆಗಳಿಗೆ ಪ್ರವೇಶಿಸುತ್ತವೆ. ಹಾಗೂ ದೇಶದ ಹೊರಕ್ಕೆ ಯಾವುದೇ ಪಾವತಿ ಮಾಡಬೇಕಾದರೂ ವಿದೇಶಿ ಕರೆನ್ಸಿಗಳಾಗಿಯೇ ಹೊರ ಹೋಗುತ್ತವೆ.

ಬಂಡವಾಳ ಖಾತೆಯಲ್ಲಿ ಈ ವಿನಿಮಯದ ದರವನ್ನು ಆರ್‌ಬಿಐ ನಿಯಂತ್ರಿಸುತ್ತದೆ. ಆದರೆ ಚಾಲ್ತಿ ಖಾತೆಯಲ್ಲಿ ಈ ವಿನಿಮಯ ದರ (೧ ಡಾಲರ್= ಇಷ್ಟು ರುಪಾಯಿ) ಆಮದಿನಿಂದಾಗಿ ಉಂಟಾಗುವ ಡಾಲರ್ ಬೇಡಿಕೆ ಮತ್ತು ರಫ್ತಿನಿಂದ ಉಂಟಾಗುವ ಡಾಲರ್ ಪೂರೈಕೆಯನ್ನು ಹೊಂದಿಕೊಂಡು ಯಾವತ್ತೂ ಏರಿಳಿಯುತ್ತದೆ. ಡಾಲರ್ ಒಳಹರಿವು ಕಡಿಮೆಯಾಗಿ ಅಥವಾ ಹೊರ ಹರಿವು ಜಾಸ್ತಿಯಾದರೆ ರುಪಾಯಿ ಬೆಲೆ ಕಳೆದುಕೊಳ್ಳುತ್ತದೆ; ವಿನಿಮಯ ದರದಲ್ಲಿ ಏರಿಕೆಯಾಗುತ್ತದೆ.
ನಮ್ಮ ದೇಶದಲ್ಲಿ ಆಮದು ಜಾಸ್ತಿ ಹಾಗೂ ರಫ್ತು ಕಡಿಮೆ. ಇದರಿಂದ ಚಾಲ್ತಿ ಖಾತೆಯಲ್ಲಿ ಜಾಸ್ತಿ ಕೊರತೆ ಉಂಟಾಗಿ ವಿನಿಮಯ ದರ ಏರುತ್ತದೆ. ಈಗ ವಿನಿಮಯ ದರ ಏರಿಬಿಟ್ಟು ಡಾಲರ್ ಒಂದರ ಸುಮಾರು ರೂ ೬೬ ಕ್ಕೆ ಬಂದು ನಿಂತಿದೆ. ಹಾಗಾಗಿ ಅದು ಎಲ್ಲಾ ಆಮದಿತ ಸರಕುಗಳ ವೆಚ್ಚವನ್ನೂ ಏರಿಸುತ್ತದೆ. ಇದು ದೇಶದೊಳಗೆ ಬೆಲೆಯೇರಿಕೆಯ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ತೈಲ, ಚಿನ್ನ ಮತ್ತು ಕೆಮಿಕಲ್ಸ್ ಇವು ನಮ್ಮ ಮುಖ್ಯ ಆಮದಿತ ಸರಕುಗಳು ಮತ್ತು ಅವುಗಳ ಬೆಲೆ ವಿನಿಮಯದರಕ್ಕೆ ಅನುಸಾರವಾಗಿ ಏರಿಳಿಯುತ್ತವೆ.

ಬೆಲೆ ನಿಯಂತ್ರಣದ ದೃಷ್ಟಿಯಿಂದ ಆಮದಿನ ನಿಯಂತ್ರಣ ಹಾಗೂ/ಮತ್ತು ರಫ್ತಿನ ಹೆಚ್ಚಿಸುವಿಕೆ ಅಗತ್ಯವಾಗಿದೆ. ತೈಲ ಮತ್ತು ಕೆಮಿಕಲ್ಸ್‌ಗಳ ಆಮದನ್ನು ನಿಯಂತ್ರಿಸುವುದು ಕಷ್ಟಕರ/ಅಸಾಧ್ಯ. ಆದರೆ ಯಾವ ಆರ್ಥಿಕ ಉಪಯೋಗವೂ ಇಲ್ಲದ ಯಾವುದೇ ಹುಟ್ಟುವಳಿ ಇಲ್ಲದ ಈ ಹಳದಿ ಲೋಹದ ಆಮದಿನ ಮೇಲೆ ಬಿಲಿಯನ್‌ಗಟ್ಟಲೆ ಡಾಲರ್ ಸುರಿಯುವುದು ಒಂದು ದೇಶದ ಒಟ್ಟಾರೆ ದೃಷ್ಟಿಯಿಂದ ಒಂದು ಆರ್ಥಿಕ ಕ್ರೌರ್ಯವೇ ಹೌದು. ಸುಮಾರು ೧೦೦೦ ಟನ್ ಚಿನ್ನ ಆಮದು ಮಾಡುವ ಭಾರತ ಜಗತ್ತಿನಲ್ಲಿಯೇ ನಂ ೧ ಚಿನ್ನದ ಆಮದುಗಾರ ರಾಷ್ಟ್ರ. ಇದು ವಿನಿಮಯ ದರದ ಮೇಲೆ ಒತ್ತಡ ಹಾಕುತ್ತಿದ್ದು ದೇಶದೊಳಗೆ ಎಲ್ಲಾ ಸರಕುಗಳ ಬೆಲೆಯನ್ನೂ ಏರಿಸಿಟ್ಟಿವೆ. ಇತ್ತೀಚೆಗಿನ ಬೆಲೆಕುಸಿತದ ಹಿನ್ನೆಲೆಯಲ್ಲಿ ಚಿನ್ನದ ಆಮದಿನಲ್ಲಿ ತೀವ್ರ ಹೆಚ್ಚಳವಾಗಿದ್ದ ಕಾರಣ ಸರಕಾರ ಕೆಲವು ನಿಯಂತ್ರಣ ಹೇರಿದೆ:

ಆಮದು ನಿಯಂತ್ರಣ:

ಸಧ್ಯ ಚಿನ್ನದ ಮೇಲಿನ ಆಮದು ಸುಂಕ ಸ್ಟಾಂಡರ್ಡ್ ಬಾರ್ ರೂಪಕ್ಕೆ ೮% ಇದ್ದದ್ದನ್ನು ಕಳೆದ ತಿಂಗಳು ೧೦% ಕ್ಕೆ ಏರಿಸಲಾಗಿದೆ. (ಇದು ಕಳೆದ ವರ್ಷ ೪% ಹಾಗೂ ೬% ಇತ್ತು) ಇದರಿಂದ ಆಮದು ಇಳಿಯಬಹುದು ಎನ್ನುವ ಆಸೆ. ಅದು ಬಿಡಿ, ಇದೀಗ ರಿಸರ್ವ್ ಬ್ಯಾಂಕು ಕೂಡಾ ಚಿನ್ನದ ಆಮದಿನ ಮೇಲೆ ಹಣಕಾಸು ಹೊಂದಿಸುವ ವಿಚಾರದಲ್ಲಿ, ಅಡಮಾನ ಸಾಲದ ವಿಚಾರದಲ್ಲಿ ಭಾರಿ ನಿಯಂತ್ರಣ ತಂದಿದೆ. ಅದಲ್ಲದೆ ಇದೀಗ ಸರಕಾರವು ಬಾರ್ ಮತ್ತು ನಾಣ್ಯದ ರೂಪದ ಚಿನ್ನದ ಆಮದನ್ನು ಸಂಪೂರ್ಣವಾಗಿ ನಿಶೇಧಿಸಿದೆ. ಅಗೋಸ್ತಿನಲ್ಲಿ ಅಧಿಕೃತ ಆಮದು ಬರೇ ೨ ಟನ್ ಆದರೆ ಅನಧಿಕೃತ ಸ್ಮಗ್ಲಿಂಗ್ ಪ್ರಮಾಣ ಗಗನಕ್ಕೇರಿದೆ.

ಚಿನ್ನದ ಭವಿಷ್ಯ:

ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿರಬೇಕಾದರೆ ಚಿನ್ನದ ಭವಿಷ್ಯ ಏನಾಗಬಹುದು? ಚಿನ್ನ ಇನ್ನೂ ಕೂಡಾ ಉತ್ತಮ ಹೂಡಿಕೆಯೇ? ಅಥವಾ ಇದ್ದದ್ದನ್ನೂ ಕೊಟ್ಟುಬಿಡುವುದು ಉತ್ತಮವೇ? ಇದು ಎಲ್ಲರನ್ನೂ ಕಾಡುವ ಪ್ರಶ್ನೆ.

ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಆರ್ಥಿಕತೆ ಸುಧಾರಿಸಿದಂತೆಲ್ಲಾ ಹಳದಿಲೋಹವನ್ನು ಮಾರಿ ಡಾಲರ್, ತೈಲ, ಶೇರು ಇತ್ಯಾದಿಗಳಲ್ಲಿ ಹೂಡಿಕೆ ಪಾಲಾಯನವಾಗುವುದು ಖಚಿತ. ಈ ದೃಷ್ಟಿಯಿಂದ ಚಿನ್ನದ ಬೆಲೆ ಇಳಿ ಮುಖವೇ. ಆದರೆ ವಿನಿಮಯ ದರ ಏರುತ್ತಿರುವ ಹಿನ್ನೆಲೆಯಲ್ಲಿ (ರುಪಾಯಿ ಮೌಲ್ಯ ಕುಸಿತ) ಹೊರಗೆ ಇಳಿದಷ್ಟು ಭಾರತದಲ್ಲಿ ಇಳಿಯಲಾರದು. ಇದು ಅಲ್ಪಕಾಲಿಕ ದೃಷ್ಟಿ.

ಆದರೆ ಒಂದು ದೀರ್ಘಕಾಲಿಕ ದೃಷ್ಟಿಯಿಂದ ನೋಡುವುದಾದರೆ ಚಿನ್ನಕ್ಕೆ ಏರಿಕೆ ಖಂಡಿತಾ ಬರಲಿದೆ ಎನ್ನುವ ಸೂಚನೆ ಎಲ್ಲೆಡೆ ಕಾಣಿಸುತ್ತದೆ. ಅತಿ ಮುಖ್ಯವಾಗಿ ನಮ್ಮ ಭೂಮಿಯಡಿಯಲ್ಲಿ ಚಿನ್ನದ ಸಂಪತ್ತು ಸೀಮಿತವಾಗಿದೆ. ವರ್ಷಕ್ಕೆ ೪೦೦೦ ಟನ್ ಗನಿಗಾರಿಕೆ ನಡೆಯುತ್ತಿರುವ ಲೆಕ್ಕದಲ್ಲಿ ಇನ್ನ್ನು ೩೦-೪೦ ವರ್ಷಗಳಲ್ಲಿ ಎಲ್ಲಾ ಗನಿಗಳು ಬರಡಾಗಲಿವೆ. ಅದಲ್ಲದೆ ಒಮ್ಮೆ ಖರೀದಿ ಮಾಡಿದ ಆಭರಣ ಚಿನ್ನ ಬಹುತೇಕ ಮರುಮಾರಾಟಕ್ಕೆ ಬರುವುದಿಲ್ಲ. ಜನರ ತಿಜೋರಿಗಳಿಗೆ ಹೋದ ಚಿನ್ನ ಅಲ್ಲೇ ದಾಸ್ತಾನಾಗುತ್ತದೆ. ಹಲವಾರು ದೇಶಗಳೂ ತಮ್ಮ ಕರೆನ್ಸಿಯ ಮೌಲ್ಯದಿಂದ ಭ್ರಮ ನಿರಸನಗೊಂಡಿದ್ದು ಅಸಲಿ ಸಂಪತ್ತಾದ ಚಿನ್ನದ ದಾಸ್ತಾನಿಗೆ ಮುಂದಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟಗಳು ಬರುತ್ತಲೇ ಇರುವ ಕಾರಣಕ್ಕೆ ಅಗಾಗ್ಗೆ ಚಿನ್ನ ಅತ್ಯಂತ ಪ್ರಿಯವಾದ ಹೂಡಿಕೆಯಾಗುತ್ತಲೇ ಇದ್ದೀತು. ಅಷ್ಟೇ ಅಲ್ಲದೆ ಸರಕಾರದ ಕಡಿವಾಣಗಳಿಗೆ ಉತ್ತರವಾಗಿ ಒಂದು ಬೃಹತ್ ಕಾಳಮಾರುಕಟ್ಟೆ ಸೃಷ್ಟಿಯಾಗಲಿದೆ ಮತ್ತು ಆ ಮಾರುಕಟ್ಟೆಯಲ್ಲಿ ಸ್ವಾಭಾವಿಕವಾಗಿ ಚಿನ್ನದ ಬೆಲೆ ಹೆಚ್ಚುವರಿ ಮಟ್ಟದಲ್ಲೇ ನಿಲ್ಲಲಿದೆ. ದೇಶದಲ್ಲಿ ತಲೆಯೆತ್ತುತ್ತಿರುವ ಭ್ರಷ್ಠಾಚಾರ ಮತ್ತು ಕಾಳಧಂದೆಗೆ ಭೂಮಿಯ ಹೊರತಾಗಿ ಚಿನ್ನವೇ ಅತ್ಯುತ್ತಮ ಹೂಡಿಕೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.

ಈ ಎಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನೋಡಿದರೆ ಚಿನ್ನದಲ್ಲಿ ಇನ್ನಷ್ಟು ಏರಿಳಿತಗಳನ್ನು ಕಾಣಬಹುದಾದರೂ ಒಂದು ದೀರ್ಘಕಾಲದ ಹೂಡಿಕೆಗೆ ಚಿನ್ನದ ಹೊಳಪು ಇನ್ನೂ ಹೋಗಿಲ್ಲ. ಹಾಗಾಗಿ ದೀರ್ಘಕಾಲದ ದೃಷ್ಟಿಯಿಂದ ಚಿನ್ನಕ್ಕೆ ಬೆಲೆ ಇಳಿದಂತೆಲ್ಲಾ ಸ್ವಲ್ಪ ಸ್ವಲ್ಪವಾಗಿ ಕೂಡಿಡುವುದು ಉತ್ತಮ.

BOX ITEM:

ಚಿನ್ನ ಖರೀದಿಗೆ ಹಲವು ಹಾದಿಗಳಿವೆ.

ಆಭರಣ, ನಾಣ್ಯ/ಬಿಸ್ಕೆಟ್, ಚಿನ್ನದ ಇಟಿಎಫ್, ಗೋಲ್ಡ್ ಫಂಡ್ – ಇವು ಚಿನ್ನದ ಖರೀದಿಯಲ್ಲಿರುವ ಆಯ್ಕೆಗಳು. ಪ್ರತಿಯೊಂದಕ್ಕೂ ತನ್ನದೇ ಆದ ಗುಣ ದೋಷಗಳಿವೆ.

ಭೌತಿಕ ಚಿನ್ನ:

ಆಭರಣ ಮಾಡಿಸಿಕೊಳ್ಳುವುದರಲ್ಲಿ ತೇಮಾನು, ಮೇಕಿಂಗ್ ಚಾರ್ಜ್ ತಗಲುತ್ತವೆ ಆದರೆ ಆಭರಣವನ್ನು ಧರಿಸಿ ಸಂಭ್ರಮಿಸುವ ಯುಟಿಲಿಟಿ ಇರುತ್ತದೆ. ಆಭರಣದ ಉಪಯುಕ್ತತೆಗೆ ಪರ್ಯಾಯವಿಲ್ಲ. ಆದರೆ ಒಂದು ಹೂಡಿಕೆಯಾಗಿ ಕೂಡಾ ಆಭರಣವನ್ನು ನೆಚ್ಚುವುದು ತಪ್ಪಾಗುತ್ತದೆ. ಹೂಡಿಕೆಗೆ ನಂಬಿಗಸ್ಥ ಚಿನ್ನದಂಗಡಿಗಳಲ್ಲಿಯೇ ಸೀಲ್ ಮತ್ತು ಪ್ರಮಾಣ ಪತ್ರವಿರುವ ನಾಣ್ಯ/ಬಾರ್ ಕೊಳ್ಳುವುದು ಒಳ್ಳೆಯದು. ಬ್ಯಾಂಕ್ ಮತ್ತು ಅಂಚೆ ಕಛೇರಿಯಲ್ಲಿ ಇವಕ್ಕೆ ದುಬಾರಿ ಬೆಲೆ ಇರುತ್ತವೆ.

ಗೋಲ್ಡ್ ಇಟಿಎಫ್:

ಇಟಿಎಫ್ ಎನ್ನುವುದು ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಅಥವ ಮಾರುಕಟ್ಟೆಯಲ್ಲಿ ಶೇರಿನಂತೆ ಮಾರಾಟವಾಗುವ ಒಂದು ಮ್ಯೂಚುವಲ್ ಫಂಡ್. ಒಂದು ಯುನಿಟ್ ಅಂದರೆ ೧ ಗ್ರಾಮ್ ಚಿನ್ನಕ್ಕೆ ಸಮ. ಇದು ಸುಲಭದಲ್ಲಿ ಆನ್-ಲೈನ್ ಆಗಿ ಖರೀದಿಸುವ ಬಾಬ್ತು ಆದರೂ ಚಿನ್ನ ನಿಮ್ಮ ಕೈಯಲ್ಲಿ ಇರುವುದಿಲ್ಲ. ಡಿಮ್ಯಾಟ್ ಮೂಲಕ ಇಟಿಎಫ್‌ಗಳನ್ನು ಶೇಖರಿಸಿ ಇಡಬಹುದು. ಲಾಖರ್ ಅಗತ್ಯವಿಲ್ಲ. ಕಳ್ಳತನದ ಭಯವಿಲ್ಲ.

ಗೋಲ್ಡ್ ಫಂಡ್:

ಅದಲ್ಲದೆ ಈ ಇಟಿಎಫ್‌ಗಳಲ್ಲೇ ಹೂಡುವ ಗೋಲ್ಡ್ ಫಂಡ್ ಕೂಡಾ ಬಂದಿವೆ. ಇವಕ್ಕೆ ಖರ್ಚು ಇನ್ನಷ್ಟು ಜಾಸ್ತಿ. ಎರಡೆರಡು ಫಂಡುಗಳ ಖರ್ಚುಗಳು ಅಡಗಿವೆ. ಇಟಿಎಫ್ ನ ವೆಚ್ಚವಲ್ಲದೆ ಇನ್ನೊಂದು ಮ್ಯೂಚುವಲ್ ಫಂದ್ ವೆಚ್ಚವೂ ಅಡಗಿದೆ. ಆದರೆ ಗೋಲ್ಡ್ ಫಂಡಿಗೆ ಇಟಿಎಫ್ ನಂತೆ ಡಿ-ಮ್ಯಾಟ್ ಖಾತೆಯ ಅಗತ್ಯವಿಲ್ಲ.

ನಿಮ್ಮ ಟಿಪ್ಪಣಿ ಬರೆಯಿರಿ