ಶೇರು ಕ್ಲಾಸು-19 ಫ್ಯೂಚರ್ಸ್ ಟ್ರೇಡಿಂಗ್

Imageಫ್ಯೂಚರ್ಸ್ ಟ್ರೇಡಿಂಗ್

ಈ ವಾರ ಶೇರು ಡಿರೈವೇಟಿವ್ಸ್ ಬಗ್ಗೆ ತಿಳಿದುಕೊಳ್ಳೋಣ. ಡಿರೈವೇಟಿವ್ ಅಂದರೆ ಮೂಲ ವ್ಯವಹಾರದಿಂದಲೇ ಹುಟ್ಟು ಪಡೆದಂತಹ ಆದರೆ ಅದಕ್ಕಿಂತ ಭಿನ್ನವಾದ ವ್ಯವಹಾರ- ತದ್ಭವ! ಶೇರು ಡಿರೈವೇಟಿವ್‌ಗಳಲ್ಲಿ ಫ್ಯೂಚರ್ಸ್ ಮತ್ತು ಆಪ್ಶನ್ಸ್ (Futures and Options) ಎಂಬ ಎರಡು ರೀತಿಯ ವ್ಯವಹಾರದ ಅವಕಾಶ ಇರುತ್ತದೆ. ಫ್ಯೂಚರ್ಸ್ ಬಗ್ಗೆ ಇವತ್ತು ಮಾತನಾಡೋಣ, ಆಪ್ಶನ್ಸ್ ಇನ್ನೊಮ್ಮೆ ನೋಡೋಣ.

ಬಹಳ ಸರಳವಾಗಿ ತಿಳ್ಕೊಳ್ಳಬೇಕು ಎಂದಿದ್ದರೆ, ಫ್ಯೂಚರ್ಸ್ ಟ್ರೇಡಿಂಗ್ ಎಂದರೆ, ಭವಿಷ್ಯತ್‌ನಲ್ಲಿ ಒಂದು ದಿನ ಒಂದು ಶೇರನ್ನು ಕೊಡುವ ಅಥವ ಕೊಳ್ಳುವ ಕರಾರು. ಉದಾಹರಣೆಗೆ ನೀವು ಜೂನ್ ರಂದು ೧೦೦ ಇನ್ಫೋಸಿಸ್ ಶೇರುಗಳನ್ನು ಶೇರೊಂದರ ರೂ ೨೨೦೦ ಕ್ಕೆ ಕೊಳ್ಳುವ ಕರಾರು ಮಾಡಿಕೊಳ್ಳುತ್ತೀರಿ. ಅವರು ಕೊಡುವ, ನೀವು ಕೊಳ್ಳುವ ಕರಾರು. ಅದುವೇ ಫ್ಯೂಚರ್ಸ್ ಟ್ರೇಡಿಂಗ್.

ಇದಕ್ಕೂ ಡೇ ಟ್ರೇಡಿಂಗ್ ತರಹ ಪೂರ್ತಿ ದುಡ್ಡು ನಿಮ್ಮಲ್ಲಿರಬೇಕಾದ ಅಗತ್ಯವಿಲ್ಲ. ಬ್ರೋಕರುಗಳು ವಿಧಿಸಿದ ಮಾರ್ಜಿನ್ ಮನಿ ಕೊಟ್ಟು ಈ ಕರಾರು ಮಾಡಿಕೊಳ್ಳಬಹುದು. ಆದರೆ ಡೇ ಟ್ರೇಡಿಂಗ್ ತರಹ ಇಲ್ಲಿ ಕೂಡಾ ಶೇರುಗಳ ಹಸ್ತಾಂತರ ಅಥವ ಡೆಲಿವರಿ ನಡೆಯುವುದೇ ಇಲ್ಲ. ಕರಾರಿನ ಪ್ರಕಾರ ಜೂನ್ ೩೦ ರಂದು ಆ ಶೇರುಗಳ ಮಾರುಕಟ್ಟೆಯ ಮಾರಾಟ ದರ ನಿಮ್ಮದಾಗುತ್ತದೆ. ನಿಮ್ಮ ನಿಗಧಿತ ದರಕ್ಕೂ ಮಾರುಕಟ್ಟೆಯ ದರಕ್ಕೂ ಇರುವ ವ್ಯತ್ಯಾಸದನ್ವಯ ಉಂಟಾಗುವ ಲಾಭ ಅಥವ ನಷ್ಟ ನಿಮ್ಮ ಖಾತೆಗೆ ಬರುತ್ತದೆ. ಆ ದಿನದ ಮೊದಲೇ ಯಾವಾಗ ಬೇಕಾದರೂ ಡೀಲ್ ಕ್ಲೋಸ್ ಮಾಡಿಕೊಳ್ಳಲೂ ಬಹುದು. ಇದೂ ಕೂಡಾ ಡೇ ಟ್ರೇಡಿಂಗ್‌ನಂತೆ ಸ್ವಲ್ಪ ಹಣದಲ್ಲಿ ಜಾಸ್ತಿ ಕೊಳ್ಳುವ ‘ಗೇರ್’ ಉಳ್ಳ ಸಲಕರಣೆ; ಹಾಗೂ ವಾಸ್ತವದಲ್ಲಿ ಶೇರುಗಳ ಹಸ್ತಾಂತರ ಇರುವುದಿಲ್ಲ. ಇದರಲ್ಲಿ ಡೇ ಟ್ರೇಡಿಂಗ್ ನಂತೆ ಶಾರ್ಟ್ ಸೆಲ್ ಮಾಡುವ ಅವಕಾಶವೂ ಇದೆ.

ನೀವು ಸ್ವಲ್ಪವೇ (೧೦%-೨೦%-೩೦% ಇತ್ಯಾದಿ) ಮಾರ್ಜಿನ್ ಮನಿ ಕೊಟ್ಟು ಈ ಕರಾರನ್ನು ಕೊಂಡಕಾರಣ ಶೇರು ಬೆಲೆಯ ದೈನಂದಿನ ಏರಿಳಿಕೆಯನ್ನು ಹೊಂದಿಕೊಂಡು ಬ್ರೋಕರ್ ನಿಮ್ಮಲ್ಲಿ ಹೆಚ್ಚುವರಿ ಮಾರ್ಜಿನ್ ಡಿಮಾಂಡ್ ಮಾಡಬಹುದು. ಉದಾ, ನೀವು ರೂ ೨೨೦೦ ಕ್ಕೆ ಕರಾರು ಮಾಡಿಕೊಂಡ ಇನ್ಫೋಸಿಸ್ ಶೇರು ಇವತ್ತು ರೂ ೨೧೦೦ ಕ್ಕೆ ಇಳಿಯಿತೆಂದಾದರೆ ಶೇರೊಂದರ ೧೦೦ ರೂಪಾಯಿಗಳ ಇಳಿಕೆಯಾದಂತಾಯಿತು. ಈ ಸಂಭಾವಿಕ ನಷ್ಟವನ್ನು ಬ್ರೋಕರ್ ನಿಮ್ಮ ಖಾತೆಯಿಂದ ದಿನದ ಅಂತ್ಯದಲ್ಲಿ ಮುರಿಯುತ್ತಾರೆ. ಮರುದಿನ, ರೂ ೨೩೦೦ ಕ್ಕೆ ಏರಿದರೆ, ಆ ಸಂಭಾವಿಕ ಲಾಭವನ್ನು ನಿಮ್ಮ ಖಾತೆಗೆ ತುಂಬುತ್ತಾರೆ. ಹೀಗೆ ಪ್ರತಿದಿನ ನಿಮ್ಮ ಕರಾರಿನ ಮೌಲ್ಯವನ್ನು ಮಾರುಕಟ್ಟೆ ದರಕ್ಕೆ ಸಮೀಕರಿಸುತ್ತಾ ನಿಮ್ಮ ಅಕೌಂಟ್ ಡೆಬಿಟ್/ಕ್ರೆಡಿಟ್ ಮಾಡುತ್ತಲೇ ಇರುತ್ತಾರೆ. (ಶಾರ್ಟ್ ಸೆಲ್ ಮಾಡಿದಲ್ಲಿ ಈ ಲೆಕ್ಕಾಚಾರ ವಿರುದ್ಧ ಗತಿಯಲ್ಲಿ ನಡೆಯುತ್ತದೆ). ಈ ಪದ್ಧತಿಯನ್ನು ಮಾರ್ಕ್-ಟು-ಮಾರ್ಕೆಟ್ ಅನ್ನುತ್ತಾರೆ.

ಕೆಲವರು ಮಾರ್ಜಿನ್ ಮನಿಗಾಗಿ ತಮ್ಮ ಶೇರುಗಳನ್ನೇ ದುಡ್ಡಿನ ಬದಲಾಗಿ ಅಡವಿಟ್ಟಿರುತ್ತಾರೆ. ಈ ಸೌಲಭವನ್ನು ಮಾರುಕಟ್ಟೆ ನಿಮಗೆ ನೀಡಿದೆ. ಅಂತಹ ಸಂದರ್ಭದಲ್ಲಿ, ಮಾರ್ಕ್-ಟು-ಮಾರ್ಕೆಟ್ ಹೊಡೆತಕ್ಕೆ ಯಾವುದೇ ದುಡ್ಡು ಲಭ್ಯವಿಲ್ಲದೆ ನಿಮ್ಮ ಖಾತೆಯಲ್ಲಿರುವ ಅಡವಿಟ್ಟ ಉತ್ತಮ ಶೇರುಗಳನ್ನೇ ಕಂಪ್ಯೂಟರ್ ನಿಮಗೆ ಅರಿವಿಲ್ಲದೆಯೇ ಮಾರಿ ನಿಮ್ಮ ಡೀಲ್ ಅನ್ನು ಕ್ಲೋಸ್ ಮಾಡಿ ಬಿಡುತ್ತದೆ. ನೀವು ಬರೇ ಅಸಹಾಯಕರಾಗಿ ಕೈ ಹಿಸುಕುತ್ತಾ ನೋಡುತ್ತಾ ಕೂರಬೇಕಷ್ಟೆ. ಇರುವ ಶೇರುಗಳನ್ನೂ ಕಳೆದುಕೊಳ್ಳುತ್ತೀರಿ, ಅದೂ ಕೂಡಾ ಅತಿ ಕಡಿಮೆ ಬೆಲೆಗೆ. ಡೀಲ್‌ನಲ್ಲಿ ಬಂದ ನಷ್ಟ ಬೇರೆ. ಆ ಬಳಿಕ ಮಾರುಕಟ್ಟೆ ವಾಪಾಸು ಚೇತರಿಸಿದರೂ ನಿಮಗದರಿಂದ ಯಾವುದೇ ಪ್ರಯೋಜನವಿರುವುದಿಲ್ಲ.

ಈ ಪ್ರಕಾರ ಫ್ಯೂಚರ್ಸ್ ಟ್ರೇಡಿಂಗ್‌ನಲ್ಲಿ ಸರ್ವಸ್ವವನ್ನೂ ಕಳೆದುಕೊಂಡವರು ಬಹಳಷ್ಟು ಜನರಿದ್ದಾರೆ. ಬೇಸರದ ಸಂಗತಿ ಏನೆಂದರೆ ಅವರಲ್ಲಿ ಹೆಚ್ಚಿನವರು ಅಮಾಯಕರು- ಫ್ಯೂಚರ್ಸ್ ಟ್ರೇಡಿಂಗ್‌ನ ಬಗ್ಗೆ ಏನೇನೂ ವಿವರಗಳನ್ನು ತಿಳಿದುಕೊಳ್ಳದೆ ಅತಿದುಡ್ಡಿನಾಸೆಗೆ ಬೆಂಕಿಯತ್ತ ಆಕರ್ಷಿತರಾದ ಹಾತೆಗಳು. ಸರಕಾರ ಅನಿರೀಕ್ಷಿತವಾಗಿ ಬಿದ್ದರೆ, ಮಾರುಕಟ್ಟೆಯಲ್ಲಿ ಹಗರಣವಾದರೆ, ಇಲ್ಲವೇ ಯಾವುದೇ ಇನ್ನಿತರ ಅತಿದೊಡ್ಡ ಆಪತ್ತು ಬಂದ ದಿನ ಆಗುವ ಅಲ್ಲೋಲ ಕಲ್ಲೋಲದಿಂದ ಟ್ರೇಡಿಂಗ್‌ನಲ್ಲಿ ಮಿತಿಮೀರಿ ಹಣಹೂಡಿದವರ ಮಾರಣಹೋಮವಾಗುತ್ತದೆ. ಫೂಚರ್ಸ್ ಹಿಂದೆ ಹೋದವರ ಫ್ಯೂಚರ್ರೇ ನಿರ್ನಾಮವಾಗಿ ಬಿಡುತ್ತದೆ. ಸಡ್ಡಾಂ ಹುಸೇನನ ಸಮೂಹ ಮಾರಕ ಶಸ್ತ್ರಾಸ್ತ್ರದಂತೆ ಕೆಲಸ ಮಾಡುತ್ತದೆ. ಈ ಮಾತನ್ನು ಹೇಳಿದ್ದು ನಾನಲ್ಲ, ವಾರನ್ ಬಫೆಟ್. ಆತನು ಡಿರೈವೇಟಿಸ್ ಬಗ್ಗೆ ನೀಡಿದ ಅದೊಂದು ‘ವಿತ್ತೀಯ ಸಮೂಹ ನಾಶಕ ಮಾರಕಾಸ್ತ್ರ’ ಎಂಬ ಹೇಳಿಕೆ ಸತ್ಯಸ್ಯ ಸತ್ಯ.

ವಿಷಯವರಿಯದವರು ಇದರಿಂದ ದೂರವಿರುವುದೇ ಒಳ್ಳೆಯದು. ಹಲವಾರು ನಿಯಮಗಳನ್ನೊಳಗೊಂಡ ಫ್ಯೂಚರ್ಸ್ ಅನ್ನು ಅರ್ಥಮಾಡಿಕೊಳ್ಳುವುದು ಅತಿ ಸುಲಭವಲ್ಲ. ಹೂಡಿಕೆದಾರರು ಈ ವ್ಯವಹಾರವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು. ಅಲ್ಲದೆ, ಆರಂಭಿಸುವಾಗಲೂ ಒಂದು ಕನಿಷ್ಟ ಮೊತ್ತದೊಂದಿಗೆ ಆರಂಭಿಸಿ ಸಾಕಷ್ಟು ಪರಿಣಿತಿ ಗಳಿಸಿ ಫ್ಯೂಚರ್ಸ್‌ನ ಎಲ್ಲಾ ಆಯಾಮಗಳನ್ನೂ ಚೆನ್ನಾಗಿ ಅರಿತಮೇಲೆಯೇ ಮುಂದುವರಿಯಬೇಕು.

ನಿಮ್ಮ ಟಿಪ್ಪಣಿ ಬರೆಯಿರಿ