ಶೇರು ಕ್ಲಾಸು-21 ಶೇರಿನಲ್ಲಿ ಮೋಸ-1 – ‘ಒಳಕೈ ವ್ಯವಹಾರ’

Image

ಶೇರಿನಲ್ಲಿ ಮೋಸ-1 – ‘ಒಳಕೈ ವ್ಯವಹಾರ’

ಶೇರು ಕೊಡ-ಕೊಳ್ಳುವ ಬಗ್ಗೆ ಇರುವ ತಾಂತ್ರಿಕ ವಿಷಯಗಳನ್ನು ಅರಿತಾಯಿತು. ಟ್ರೇಡಿಂಗ್ ಬಗ್ಗೆ, ಹೂಡಿಕೆಯ ಬಗ್ಗೆ, ಇತ್ಯಾದಿ.

ಇನ್ನು ಶೇರು ಮಾರುಕಟ್ಟೆಯಲ್ಲಿ ನಡೆಯುವ ಭಾರಿ ಮೋಸದ ಬಗ್ಗೆಯೂ ಅರಿವಿರಬೇಕು ತಾನೆ? ಅರಿವಿಲ್ಲದ ಅಮಾಯಕರು ಎಲ್ಲವನ್ನೂ ಹಾಲೆಂದು ನಂಬಿ ಹಾಲಾಹಲವನ್ನು ಕುಡಿದಂತಾಗಬಾರದು ತಾನೆ? ಅದಕ್ಕಾಗಿ ಸ್ಥೂಲವಾಗಿಯಾದರೂ ಮಾರುಕಟ್ಟೆಯಲ್ಲಿ ನಡೆಯುವ ಮೋಸಗಳ ಬಗ್ಗೆ ತಿಳಿದಿರುವುದು, ಹಾಗೂ ಅದರ ಬಗ್ಗೆ ಜಾಗ್ರತೆ ವಹಿಸುವುದು ಉತ್ತಮ.

ಮೋಸಗಳ ಸರಪಣಿಯಲ್ಲಿ ಒಂದು ಅತಿಮುಖ್ಯ ಕೊಂಡಿಯೆಂದರೆ ‘ಇನ್ಸೈಡರ್ ಟ್ರೇಡಿಂಗ್’ ಅಥವ ‘ಒಳಕೈ ವ್ಯವಹಾರ’

ಏನಿದು ಇನ್ಸೈಡರ್ ಟ್ರೇಡಿಂಗ್?

ಒಂದು ಕಂಪೆನಿಯ ಲಾಭ ನಷ್ಟಗಳನ್ನೊಳಗೊಂಡ ಅಮೂಲ್ಯ ಮಾಹಿತಿ ಸಾರ್ವಜನಿಕರಿಗೆ ತಿಳಿಸುವ ಮೊದಲೇ ಕಂಪೆನಿಯೊಳಗಣ ಅದರ ಅರಿವಿರುವ ಒಬ್ಬ ವ್ಯಕ್ತಿ ಅದನ್ನು ಉಪಯೋಗಿಸಿಕೊಂಡು ಲಾಭಕ್ಕೋಸ್ಕರ ಶೇರು ಮಾರುಕಟ್ಟೆಯಲ್ಲಿ ನಡೆಸುವ ವ್ಯವಹಾರವೇ ‘ಇನ್ಸೈಡರ್ ಟ್ರೇಡಿಂಗ್’ ಅಥವ ‘ಒಳಕೈ ವ್ಯವಹಾರ.’ ಇದು ಕಾನೂನುಬಾಹಿರ, ಒಂದು ಕ್ರಿಮಿನಲ್ ಅಪರಾಧ ಮತ್ತು ಅಮಾಯಕ ಹೂಡಿಕೆದಾರರ ಹಗಲುದರೋಡೆ. ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಇದು ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ಅಮೇರಿಕಾದಲ್ಲಿ ಸಿಕ್ಕಿಬಿದ್ದ ಶ್ರೀಲಂಕಾ ಮೂಲದ ರಾಜರತ್ನಂ ಈ ಚಟುವಟಿಕೆಯಲ್ಲಿ ಒಬ್ಬ ಭಾರೀ ದೊಡ್ಡ ತಿಮಿಂಗಿಲವೆಂದು ತಿಳಿಯಲಾಗಿದೆ.

ಒಂದು ಕಂಪೆನಿಯ ಬಗ್ಗೆ ಮುಂದೆ ನಡೆಯಲಿರುವ ಏನೋ ಒಂದು ಸಿಹಿಸುದ್ದಿ ಮಾರುಕಟ್ಟೆಗೆ ಅಧಿಕೃತವಾಗಿ ತಿಳಿಸುವ ಮೊದಲೇ ಆ ಸುದ್ದಿ ತಿಳಿದಿರುವವರು ಗುಪ್ತವಾಗಿ ಆ ಶೇರುಗಳನ್ನು ಕೊಂಡುಕೊಳ್ಳುತ್ತಾರೆ. ಇದು ತಮ್ಮ ಹೆಸರಿನಲ್ಲೂ ಆಗಿರಬಹುದು, ಬೇನಾಮಿ ಹೆಸರಿನಲ್ಲೂಆಗಿರಬಹುದು. ಆಮೆಲೆ ಸುದ್ದಿ ಹೊರಬಿದ್ದಕ್ಷಣ ಮಾರುಕಟ್ಟೆಯಲ್ಲಿ ಆ ಶೇರಿನ ಬೆಲೆ ಏರುತ್ತದೆ ತಾನೆ? ಈ ಒಳಕೈ ಟ್ರೇಡರುಗಳು ಹಾಗೆ ಕೊಂಡುಕೊಂಡ ಶೇರನ್ನು ಬಳಿಕ ಹೆಚ್ಚಿನ ಬೆಲೆಯಲ್ಲಿ ಮಾರಿ ದುಡ್ಡು ಕಮಾಯಿಸುತ್ತಾರೆ. ಇಲ್ಲವೇ, ತನ್ನ ಕಂಪೆನಿಯ ಯಾವುದೇ ಕಹಿ ಸುದ್ದಿ ಹೊರಬರುವ ಮೊದಲೇ ತಮ್ಮಲ್ಲಿದ್ದ ಶೇರುಗಳನ್ನು ಮಾರಿಬಿಡುತಾರೆ. ಇಲ್ಲವೇ, ತಮ್ಮಲ್ಲಿಲ್ಲದ ಶೇರುಗಳನ್ನು ‘ಶಾರ್ಟ್ ಸೆಲ್’ ಕೂಡಾ ಮಾಡಿಬಿಡುತ್ತಾರೆ. ಆಮೇಲೆ ಸುದ್ದಿ ಸಾರ್ವಜನಿಕವಾಗಿ ಶೇರುಬೆಲೆ ಬಿದ್ದ ಮೇಲೆ ವಾಪಾಸು ಅವನ್ನು ಕೊಂಡು ಭಾರೀ ಲಾಭ ಕಮಾಯಿಸುತ್ತಾರೆ.

ಸುದ್ದಿ ಸಾರ್ವಜನಿಕರಿಗೆ ತಿಳಿಯುವ ಮೊದಲೇ ಗುಪ್ತವಾಗಿ ಕೆಲವು ಒಳಕೈಗಳು ಮಾತ್ರ ಅದರ ಅನ್ಯಾಯವಾದ ಲಾಭಗಳಿಸುವುದರಿಂದ ಇದರ ವಿರುದ್ಧ ಕಾನೂನು ಇವೆ. ಶೇರುಬೆಲೆಯ ಮಟ್ಟಿಗೆ ಸೂಕ್ಷ್ಮವಾದ ಮಾಹಿತಿಗಳನ್ನು ಹೊಂದಿರುವ ಕಂಪೆನಿಯ ಅಧಿಕಾರಿಗಳ ಶೇರು ವ್ಯವಹಾರದ ಮೇಲೆ ಹಲವು ನಿರ್ಬಂಧಗಳಿವೆ. ತಮಗೆ ಗೊತ್ತಿರುವ ವಿಚಾರಗಳನ್ನು ಗೌಪ್ಯವಾಗಿ ಇಡುವುದು ಅವರ ಜವಾಬ್ದಾರಿಯಾಗಿದೆ. ಅವರು ನಡೆಸುವ ಶೇರು ವ್ಯವಹಾರಗಳ ಬಗ್ಗೆ ಮಾರುಕಟ್ಟೆಗೆ ತತ್ಕ್ಷಣವೇ ಸೂಚಿಸಬೇಕಾದದ್ದು ಕೂಡಾ ಖಡ್ಡಾಯವಾಗಿದೆ. ಆದರೂ ನಡೆಯುವ ಒಳಕೈ ವ್ಯವಹಾರಗಳ ಮೇಲೆ ಹಲವು ಬಾರಿ ಸೆಬಿಯು ಕೇಸು ದಾಖಲಿಸಿ ಹಲವರ ವಿರುದ್ಧ ಮೊಕದ್ದಮೆ ನಡೆಸಿದೆ. ಕೆಲವರಿಗೆ ಶಿಕ್ಷೆಯೂ ಆಗಿದೆ.

ಸಾರ್ವಜನಿಕರಿಗೆ ಇಂತಹ ಕಾನೂನು ಬಾಹಿರ ಅನ್ಯಾಯದ ಚಟುವಟಿಕೆಗಳ ಬಗ್ಗೆ ಅರಿವಿರಬೇಕಾದುದು ಅಗತ್ಯ. ಅಲ್ಲದೆ, ಗೊತ್ತಾದ ಹಾಗೆ ಈ ರೀತಿ ವ್ಯವಹಾರ ನಡೆಸುವ ಕುಪ್ರಸಿದ್ಧ ಪ್ರೊಮೋಟರ್ಸ್ ಇರುವ ಕಂಪೆನಿಗಳಿಂದ ದೂರವಿರುವುದು ಒಳ್ಳೆಯದು. ಯಾಕೆಂದರೆ ಅವರುಗಳು ತಮ್ಮ ಜೇಬು ತುಂಬಿಸುವುದರಲ್ಲೇ ಮಗ್ನರಾಗಿರುತ್ತಾರೆಯೇ ಹೊರತು ನಮ್ಮ ಒಳಿತಿಗೆ ಎಂದೂ ಶ್ರಮಿಸಲಾರರು.

ನಿಮ್ಮ ಟಿಪ್ಪಣಿ ಬರೆಯಿರಿ