ಕಾಕು-183 ಬರುತಿದೆ ಏಕರೂಪಿ ಆರೋಗ್ಯವಿಮಾ ಪಾಲಿಸಿ

ಇಲ್ಲಿ ‘ಕಾಸು ಕುಡಿಕೆ’ ಅಂತ ಬೋರ್ಡ್ ಹಾಕಿ ಭಾಷಣ ಬಿಗಿಯುವ ಬಿಸಿನೆಸ್ ಶುರು ಮಾಡಿದಾರಾಭ್ಯ ಒಂದೇ ಸವನೆ ಪ್ರಶ್ನೆಗಳು ಬರುತ್ತಲೇ ಇವೆ. ಯಾವ ಶೇರು ಕೊಂಡರೆ ಒಳ್ಳೇದು? ಯಾವುದು ಮೇಲೇರೀತು? ಯಾವುದು ಗೋತಾ ಹೊಡೆದೀತು? ಟಾಕ್ಸ್ ಉಳಿತಾಯ ಹೇಗೆ? ಈಗ ಚಿನ್ನ ಕೊಳ್ಳಬಹುದೇ? ನಾಳೆ ಭೂಮಿಗೆ ಬೆಲೆ ಬಂದೀತೇ? ಇತ್ಯಾದಿ ಇತ್ಯಾದಿ. ಕಾಕು ಅಂದಮೇಲೆ ಇವೆಲ್ಲ ಸಾಮಾನ್ಯ. ಜನತೆಗೆ ನಾಲ್ಕು ಉಪಕಾರ ಆಗಲಿ ಅಂತಾನೇ ಉದಯವಾಣಿ ಮತ್ತು ನಾನು ಸೇರಿ ಈ ವಿತ್ತದಂಗಡಿ ಓಪನ್ ಮಾಡಿದ್ದು ಅಂದ ಮೇಲೆ ಈ ರೀತಿಯ ಸಮಸ್ಯೆಗಳಿಗೆ ಯಥಾನುಶಕ್ತಿ ಉತ್ತರಿಸುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೇ ನಮ್ಮ ಖುಶಿಯೂ ಅಡಗಿದೆ.

ಆದರೆ ಈ ಹೆಲ್ತ್ ಪಾಲಿಸಿ ಎಂಬ ಭಯಂಕರ ಪ್ರಾಣಿಯನ್ನು ಆ ಬ್ರಹ್ಮ ಯಾವತ್ತು ಹುಟ್ಟು ಹಾಕಿದನೋ ಆವತ್ತಿನಿಂದ ನನಗೆ ನಡುಕ ಆರಂಭವಾಗಿದೆ. ಯಾವಾಗ ಫೋನ್ ರಿಂಗುಣಿಸಿದರೂ ಓ ದೇವರೇ, ‘ಹೆಲ್ತ್ ಪಾಲಿಸಿಗಳಲ್ಲಿ ಯಾವುದು ಬೆಸ್ಟ್’ ಎನ್ನುವ ಪ್ರಶ್ನೆ ಮಾತ್ರ ಕೇಳದಿರಲಿ ಅಂತ ಪ್ರಾರ್ಥಿಸಿಯೇ ಫೋನೆತ್ತಿ ಹಲೋ ಅನ್ನುತ್ತೇನೆ. ಅದು ಯಾಕೆಂದರೆ ಆರೋಗ್ಯ ವಿಮೆ ಅಥವ ಹೆಲ್ತ್ ಪಾಲಿಸಿಗಳನ್ನು ತುಲನೆ ಮಾಡಿ ಯಾವುದು ಉತ್ತಮ ಎಂದು ಹೇಳುವುದು ಸ್ವತಃ ಸೃಷ್ಟಿಕರ್ತನಾದ ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ. ಅಷ್ಟೊಂದು ರೀತಿಯ ಪಾಲಿಸಿಗಳು! ಅಬ್ಬಬ್ಬ !! ಒಂದೊಂದಕ್ಕೆ ಒಂದೊಂದು ಲಕ್ಷಣಗಳು. ಒಂದರಂತೆ ಒಂದು ಇಲ್ಲ. ಕೆಲವದರಲ್ಲಿ ಇದು ಇದ್ದರೆ ಅದು ಇಲ್ಲ. ಇನ್ನು ಕೆಲವದರಲ್ಲಿ ಅದು ಇದ್ದರೆ ಇದು ಇಲ್ಲ. ಹತ್ತಿಪ್ಪತ್ತು ವಿಚಾರಗಳಲ್ಲಿ ವಿಭಿನ್ನ ಲಕ್ಷಣಗಳನ್ನು ಹೊಂದಿರುವ ಈ ಆರೋಗ್ಯ ವಿಮಾ ಪಾಲಿಸಿಗಳನ್ನು ತುಲನೆ ಮಾಡುವುದಾದರೂ ಹೇಗೆ? ಇವುಗಳು ಒಂದು ರೀತಿಯಲ್ಲಿ ಮೊಬಾಯಿಲ್ ಕಂಪೆನಿಗಳ ರೇಟ್ ಪ್ಲಾನ್ ಇದ್ದಂತೆ. ಕಾಲ್ ಚಾರ್ಜ್ ಕಡಿಮೆಯಿದ್ದರೆ ಎಸ್ಸೆಮ್ಮೆಸ್ ಫ್ರೀ ಇಲ್ಲ. ಎಸ್ಸೆಮ್ಮೆಸ್ ಫ್ರೀ ಇದ್ದರೆ ಮಿನಿಮನ್ ಚಾರ್ಜ್ ಜಾಸ್ತಿ. ಅದು ಕಡಿಮೆಯಿದ್ದರೆ ಕಾಲ್ ರೇಟ್ ಅಧಿಕ ಈ ರೀತಿ ಒಂದಲ್ಲಾ ಒಂದು ಕೊಕ್ಕೆಗಳು. ಒಂದರಲ್ಲಿ ಕೊಟ್ಟರೆ ಇನ್ನೊಂದರಲ್ಲಿ ಹಿಡಿದಿಡುತ್ತಾರೆ. ತೌಲನಿಕ ವಿಶ್ಲೇಷಣೆಗೆ ಇಳಿದರೆ ಅಭಿಮನ್ಯು ಚಕ್ರವ್ಯೂಹ ಹೊಕ್ಕ ಅನುಭವಾಗುತ್ತದೆ. ಅವನ್ನೆಲ್ಲಾ ತುಲನೆ ಮಾಡುತ್ತಾ ಕೂರುವುದರ ಬದಲು ಸಿಕ್ಕಿದ ಪ್ಲಾನ್ ತೆಗೆದುಕೊಂಡು ಆಮೇಲೆ ಅದೇ ಬೆಸ್ಟ್ ಅಂತ ಸ್ನೇಹಿತರ ಹತ್ತಿರ ವಾದ ಮಾಡುವುದೇ ಸುಲಭವೇನೋ?

ಒಂದು ಹೆಲ್ತ್ ಪಾಲಿಸಿಯಲ್ಲಿ ಕಟ್ಟುವ ಪ್ರೀಮಿಯಂ ಅಲ್ಲದೆ ಇನ್ನೂ ಹಲವಾರು ವಿಚಾರಗಳು ವಿಭಿನ್ನವಾಗಿರುತ್ತವೆ. ಬೇರೆ ಬೇರೆ ಕಂಪೆನಿಗಳ ವಿವಿಧ ಪಾಲಿಸಿಗಳಲ್ಲಿ ಡಾಕ್ಟರ್ ಫೀಸ್, ರೂಮ್ ಬಾಡಿಗೆ, ಟೆಸ್ಟ್ ಶುಲ್ಕ ಈ ರೀತಿ ಖರ್ಚಿನ ವಿಭಾಗಗಳಲ್ಲಿ ಪ್ರತ್ಯೇಕ ಉಪಮಿತಿಗಳನ್ನು ಹೇರಲಾಗುತ್ತದೆ. ಕೊಂಡ ಪಾಲಿಸಿಯನ್ನು ಊರ್ಜಿತಗೊಳಿಸುತ್ತಾ ಹೋಗುವ ಗರಿಷ್ಠ ವಯೋಮಿತಿ ಕೂಡಾ ಬೇರೆ ಬೇರೆಯಾಗಿರುತ್ತದೆ. ಒಟ್ಟಾರೆ ಕ್ಲೈಮ್ ಮೊತ್ತದಲ್ಲಿ ಪಾಲಿಸಿದಾರ ಕೈಯಿಂದ ಹಾಕಬೇಕಾದ ಸಹಪಾವತಿ ಅಥವ ಕೋ-ಪೆಯ್ಮೆಂಟ್ ಭಾಗ ಕೂಡಾ ಪಾಲಿಸಿಯಿಂದ ಪಾಲಿಸಿಗೆ ವ್ಯತ್ಯಾಸವಾಗುತ್ತದೆ. ಪಾಲಿಸಿಗಳಲ್ಲಿ ಅದೆಷ್ಟೋ ರೋಗಗಳನ್ನು ಹೊರತುಪಡಿಸಲಾಗಿರುತ್ತದೆ. ಆದರೆ ಈ ಲಿಸ್ಟ್ ಪಾಲಿಸಿಯಿಂದ ಪಾಲಿಸಿಗೆ ವ್ಯತ್ಯಾಸವಾಗುತ್ತದೆ. ಇದರಲ್ಲಿ ಏಕರೂಪತೆ ಇರುವುದಿಲ್ಲ. ಪ್ರಿ-ಎಗ್ಸಿಸ್ಟಿಂಗ್ ಡಿಸೀಸ್ ಅಥವ ಪಾಲಿಸಿಕೊಳ್ಳುವ ಮೊದಲೇ ನಾವುಗಳು ಸಾಕುತ್ತಾ ಬಂದಿರುವ ಪೂರ್ವಭಾವಿ ರೋಗಗಳಿಗೆ ಒಂದು ಅವಧಿಯವರೆಗೆ ಕವರ್ ಇಲ್ಲ. ಅದಲ್ಲದೆ ಒಂದು ಬಾರಿ ಕ್ಲೈಮ್ ಮಾಡಿದೊಡನೆ ಆ ರೋಗ ಪೂರ್ವಭಾವಿ ರೋಗದ ಪಟ್ಟಿಗೆ ಸೇರಿಕೊಳ್ಳುತ್ತದೆ. ಮತ್ತು ಅವುಗಳ ಕವರ್ ಆರಂಭವಾಗಲು ಎಷ್ಟು ಸಮಯ (ವೈಟಿಂಗ್ ಪೀರಿಯಡ್) ಕಾಯಬೇಕು? ಪಾಲಿಸಿಗಳಿಂದ ವಿಮಾ ಮೊತ್ತ ಕ್ಲೈಮ್ ಮಾಡುವ ವಿಧಾನದಲ್ಲಿ ಕೂಡಾ ವ್ಯತ್ಯಾಸಗಳಿವೆ. ಕ್ಯಾಶ್‌ಲೆಸ್ ಸೌಲಭ್ಯದಲ್ಲಿ ಪಾಲಿಸಿದಾರ ಆಸ್ಪತ್ರೆಗೆ ದುಡ್ಡು ನೀಡಬೇಕಾಗಿಲ್ಲ. ವಿಮಾ ಕಂಪೆನಿಯೇ ನೇರವಾಗಿ ನೀಡುತ್ತದೆ. ಆ ಸೌಲಭ್ಯ ಇಲ್ಲವಾದರೆ ನಾವೇ ಮೊದಲು ಅಸ್ಪತ್ರೆಯಲ್ಲಿ ಬಿಲ್ ಸೆಟಲ್ ಮಾಡಿ ಆಮೇಲೆ ವಿಮಾ ಕಂಪೆನಿಗೆ ಅರ್ಜಿ ಹಾಕಿ ದುಡ್ಡು ಪಡಕೊಳ್ಳಬೇಕು. ಕ್ಯಾಸ್‌ಲೆಸ್ ನಲ್ಲಿ ವಿಮಾ ಕಂಪೆನಿಗಳು ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ಸ್ (ಟಿಪಿಎ) ಗಳ ಸಹಾಯದಿಂದ ಕ್ಲೈಮ್ ಸೆಟಲ್ ಮಾಡಿಸಿಕೊಳ್ಳುತ್ತಾರೆ. ಮತ್ತು ಇತ್ತೀಚೆಗೆ ಈ ವಿಮಾ ಕಂಪೆನಿಗಳು ಟಿಪಿಎಗಳಿಗೆ ಕ್ಲೈಮ್ ಸೆಟಲ್ ಮಾಡದಿರುವುದಕ್ಕೆ ಬೋನಸ್ ಕೊಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಇನ್ನೂ ಕೇಳಬೇಕೇ? ಬಾಕ್ಟೀರಿಯಾ ಗಾತ್ರದ ಅಕ್ಷರಗಳಲ್ಲಿ ರೀಮುಗಟ್ಟಲೆ ಅರ್ಥವಾಗದ ಇಂಗ್ಲಿಷಿನಲ್ಲಿ ನಿರ್ಬಂಧಗಳನ್ನು ಬರೆದು ನಿಮ್ಮ ಆಟೊಗ್ರಾಫ್ ಪಡಕೊಳ್ಳುತ್ತಾರೆ. ಅದರಲ್ಲಿ ಏನೇನು ಬರೆದಿವೆಯೋ ಅದು ದೇವರಿಗೆ ಬಿಡಿ, ಆ ಕಂಪೆನಿಗಳ ವಕೀಲರಿಗೂ ಗೊತ್ತಿರಲಾರದು. ಇವುಗಳ ಪರಿಚಯ ನಮಗಾಗುವುದು ಕ್ಲೈಮ್ ಮಾಡಲು ಹೋದಾಗಲೇ. ಅದಲ್ಲದೆ ಪಾಲಿಸಿಗಳಲ್ಲಿ ಉಪಯೋಗಿಸಿರುವ ಈ ಎಲ್ಲಾ ಶಬ್ದಗಳಿಗೆ ಅರ್ಥ ವ್ಯತ್ಯಾಸವೂ ಇರುತ್ತದೆ ಮತ್ತು ಅದರಿಂದಲೇ ಹಲವಾರು ಸಮಸ್ಯೆಗಳು ಉತ್ಪನ್ನವಾಗುತ್ತವೆ. ಅತ್ಯಂತ ಚೀಪ್ ಅಂತ ಒಂದು ಪಾಲಿಸಿ ಕೊಂಡರೆ ಈ ಎಲ್ಲಾ ಕೊಕ್ಕೆಗಳ ಫಲವಾಗಿ ನಿಮಗೆ ಕ್ಲೈಮ್ ಸಮಯದಲ್ಲಿ ಏನೂ ಸಿಕ್ಕದೇ ಹೋಗಬಹುದು. ಪಾಲಿಸಿ ಕೊಳ್ಳುವವರೆಗೆ ನಿಮಗೆ ದುಂಬಾಲು ಬೀಳುವ ಕಂಪೆನಿಗಳು ಕ್ಲೈಮ್ ಸಮಯಕ್ಕೆ ನಿಮ್ಮನ್ನು ವೈರಿಗಳಂತೆ ಕಾಣುವುದು ವಿರಳವೇನಲ್ಲ. ಒಬ್ಬೊಬ್ಬರ ಸರ್ವಿಸ್ ಒಂದೊಂದು ರೀತಿ. ಮತ್ತದು ಕಂಪೆನಿಯ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಬದಲಾಗುತ್ತಿರುತ್ತದೆ ಕೂಡಾ.

ಈಗ ಹೇಳಿ, ಇವೆಲ್ಲಾ ಕಂಡಿಶನ್‌ಗಳನ್ನು ಕಲೆಹಾಕಿ ತುಲನೆಮಾಡಿ ಬೆಸ್ಟ್ ಪಾಲಿಸಿ ಯಾವುದೆಂದು ಹೇಳಲು ಸಾಧ್ಯವೇ? ಅದಕ್ಕಾಗಿಯೇ ವಿಶ್ಲೇಷಕರೂ ಕೂಡಾ ಎಲ್ಲಾ ಹೆಲ್ತ್ ಪಾಲಿಸಿಗಳ ಗುಣ ಲಕ್ಷಣಗಳನ್ನು ವಿವರಿಸುತ್ತಾರೆಯೇ ವಿನಃ ಬೆಸ್ಟ್ ಪಾಲಿಸಿ ಯಾವುದೆಂದು ನಿಮಗೆ ಯಾವತ್ತೂ ಹೇಳುವುದೇ ಇಲ್ಲ.

ಕುಂಭಕರ್ಣನ ಅಪರಾವತಾರವಾದ ಇನ್ಶೂರನ್ಸ್ ರೆಗ್ಯುಲೇಟರ್ ಐಆರ್‌ಡಿಎ ಕೊನೆಗೂ ಎಚ್ಚೆತ್ತಿದೆ. ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳು ಏಕರೂಪಿಯಾಗಿ ಒಂದು ಸ್ಟಾಂಡರ್ಡ್ ಯುನಿಪಾರ್ಮ್ ರೀತಿಯಲ್ಲಿ ಜಾರಿಯಲ್ಲಿರಬೇಕು ಎಂಬ ಕಾನೂನನ್ನು ಈಗ ತಂದಿದೆ. ಈ ಹೊಸ ಮಾರ್ಗದರ್ಶಿ ಅಕ್ಟೋಬರ್ ೧ ರಿಂದ ಜಾರಿಗೆ ಬರುತ್ತದೆ. ಆ ಬಳಿಕ ಒಂದೊಂದು ಪಾಲಿಸಿ ಒಂದೊಂದು ರೀತಿಯಲ್ಲಿ ನಿಮ್ಮನ್ನು ಶೋಷಣೆ ಮಾಡುವುದಿಲ್ಲ. (ಎಲ್ಲವೂ ಒಂದೇ ರೀತಿಯಲ್ಲಿ ಶೋಷಣೆ ಮಾಡುತ್ತವೆಯೋ ಅಂತ ಕೇಳಬೇಡಿ) ಎಲ್ಲಾ ಕಂಪೆನಿಗಳ ವಿಮಾ ಪಾಲಿಸಿಗಳ ನಿಯಮಾವಳಿಗಳು ಒಂದೇ ರೀತಿಯಲ್ಲಿದ್ದು ಅವುಗಳ ಪ್ರೀಮಿಯಂ ದರಗಳ ತುಲನೆ ಸುಲಭವಾದೀತು.

ಮೊತ್ತ ಮೊದಲನೆಯದಾಗಿ ಈ ಮಾರ್ಗದರ್ಶಿ ಪ್ರಕಾರ ವಿಮಾ ಕ್ಷೇತ್ರದಲ್ಲಿ ಉಪಯೋಗದಲ್ಲಿರುವ ೪೬ ಪದಗಳ ಅರ್ಥವನ್ನು – ಕ್ಯಾಶ್‌ಲೆಸ್, ಪೂರ್ವಭಾವಿ ರೋಗ, ಕ್ರಿಟಿಕಲ್ ಇಲ್‌ನೆಸ್, ಇತ್ಯಾದಿಗಳನ್ನು ಇದಮಿತ್ಥಂ ಎಂದು ನಿಗದಿಪಡಿಸಿದ್ದಾರೆ. ಬೇಕಾಬಿಟ್ಟಿ ಪದಪಳಕೆ ಮಾಡಿ ಗ್ರಾಹಕರಿಗೆ ಟೋಪಿ ಹೊಲಿಯುವ ಸ್ವಾತಂತ್ರ್ಯ ಅವರಿಗೆ ಇನ್ನು ಮುಂದೆ ಇರುವುದಿಲ್ಲ. ಒಮ್ಮೆ ಕೊಂಡ ಪಾಲಿಸಿಯನ್ನು ಜೀವಿತಾವಧಿಯವರೆಗೆ ಊರ್ಜಿತಗೊಳಿಸುತ್ತಾ ಹೋಗಬಹುದು. ೭೫ರ ವಯಸ್ಸು ತಲುಪಿದಾಗ ಇನ್ನು ರಿನ್ಯೂವಲ್ ಇಲ್ಲ, ಎನ್ನುವಂತಿಲ್ಲ. ಪೇರಿಸಿಟ್ಟ ಬೋನಸ್ ಅನ್ನು ಒಂದೇ ಕ್ಲೈಮ್ ಆದೊಡನೆ ಸಂಪೂರ್ಣವಾಗಿ ಶೂನ್ಯಗೊಳಿಸುವಂತಿಲ್ಲ. ಅದು ಸೇರಿಕೆಯಾದ ಪ್ರಮಾಣದಲ್ಲಿಯೇ ಇಳಿಕೆಯಾಗತಕ್ಕದ್ದು. ಪಾಲಿಸಿಗಳಿಗೆ ಖಡ್ಡಾಯವಾಗಿ ೧೫ ದಿನಗಳ ಫ್ರೀ ಪರಿಶೀಲನಾ ಅವಧಿ ನೀಡತಕ್ಕದ್ದು. ಟಿಪಿಎ ಗಳಿಗೆ ಕ್ಲೈಮ್‌ಗಳನ್ನು ಸಂಸ್ಕರಿಸುವ ಕೆಲಸ ಮಾತ್ರವೇ ಇರುತ್ತದೆ; ಕ್ಲೈಮ್ ಸೆಟಲ್ ಮಾಡುವ ಜವಾಬ್ದಾರಿ ಕಂಪೆನಿಗಳೇ ವಹಿಸತಕ್ಕದ್ದು. ಪ್ರೀಮಿಯಂ ಕಟ್ಟುವ ಗ್ರೇಸ್ ಅವಧಿ ೩೦ ದಿನಗಳು ಆಗಿರುತ್ತದೆ. ವೈಯಕ್ತಿಕವಾಗಿ ಒಬ್ಬೊಬ್ಬರಿಗೆ ಕ್ಲೈಮ್ ಜಾಸ್ತಿಯಾದಂತೆ ಜಾಸ್ತಿ ಪ್ರೀಮಿಯ್ಂ ವಿಧಿಸುವಂತಿಲ್ಲ. ವಿಮಾ ಸೌಲಭ್ಯದಿಂದ ಹೊರತುಪಡಿಸಲಾದ ೧೯೯ ವೆಚ್ಚಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲೂ ಇನ್ನು ಮುಂದೆ ಯಾವುದೇ ಅಸ್ಪಷ್ಟತೆ ಇರಲಾರದು.

ಈ ಹೊಸ ಮಾರ್ಗದರ್ಶಿಯ ಬಗ್ಗೆ ಇನ್ನಷ್ಟು ವಿವರವಾಗಿ ಅಕ್ಟೋಬರಿನಲ್ಲಿ ಅವು ಅನುಷ್ಠಾನಕ್ಕೆ ಬಂದ ನಂತರ ನೋಡೋಣ. ಬೆಸ್ಟ್ ಪಾಲಿಸಿ ಯಾವುದೆಂದು ಹೇಳಲೂ ಆವಾಗ ಸಾಧ್ಯವಾದೀತು. ಸಧ್ಯಕ್ಕೆ ಈ ಬೆಳವಣಿಗೆಯ ಔಚಿತ್ಯ ಮತ್ತು ಮಹತ್ವಗಳ ಅರಿವು ಮೂಡಿಸಿಕೊಂಡರೆ ಸಾಕು. ಈ ಮಾರ್ಗದರ್ಶಿಯಿಂದ ತಡವಾಗಿಯಾದರೂ ಇರ್ಡಾ ಒಂದು ಮಹತ್ತರದ ಅತ್ಯಗತ್ಯವಾದ ಹೆಜ್ಜೆ ಇಟ್ಟಂತಾಗಿದೆ.

ನಮ್ಮ ದೇಶದಲ್ಲಿ ಆರ್ಥಿಕ/ಹೂಡಿಕೆ ವಿಚಾರದಲ್ಲಿ ಸ್ಪಷ್ಟವಾದ ಕಾನೂನುಗಳು ಬರುವುದೇ ಇಲ್ಲ. ಆ ಬಗ್ಗೆ ಯಾರೂ ದನಿಯೆತ್ತುವುದೇ ಇಲ್ಲ. ಎಲ್ಲಾ ರೀತಿಯ ಜಾತಿ, ಮತ, ಲಿಂಗ ಆಧಾರಿತ ಶೋಷಣೆಗಳ ವಿರುದ್ಧ ಹೋರಾಟ ಹಾಗೂ ಕಾನೂನುಗಳು ಬರುತ್ತಲೆ ಇವೆಯಾದರೂ ವಿತ್ತೀಯ ಟೋಪಿಗಳನ್ನು ಹೊಲಿಯುವ ತರಹೇವಾರಿ ಸ್ಕೀಮುಗಳ ಮತ್ತು ಸ್ಕಾಮುಗಳ ವಿರುದ್ಧ ಒಂದು ಸ್ಪಷ್ಟವಾದ ಕಾನೂನು ಮತ್ತು ಶಿಕ್ಷಾ ಕ್ರಮ ಬರುವುದೇ ಇಲ್ಲ. ಸಾರದಾ ಚಿಟ್ಸ್‌ನಂತಹ ಪಾಂಜ಼ಿ ಸ್ಕೀಮುಗಳ ವಿರುದ್ಧ ನಿರ್ದಿಷ್ಠ ಕಾನೂನು ಭಾರತದಲ್ಲಿ ಇನ್ನೂ ಇಲ್ಲ! ಏನಿದ್ದರೂ ಬಲುಹೋರಾಟದ ಬಳಿಕ ಬರುವುದು ಈ ರೀತಿಯ ಅಲ್ಪಸ್ವಲ್ಪ ಸುಧಾರಣಾ ಕ್ರಮಗಳು ಮಾತ್ರ. ಸದ್ಯಕ್ಕೆ ಇದರಲ್ಲೇ ತೃಪ್ತಿ ಪಟ್ಟುಕೊಳ್ಳೋಣ. ಆಗದೇ?

೮೮೮

ನಿಮ್ಮ ಟಿಪ್ಪಣಿ ಬರೆಯಿರಿ