‘ಸರಕಾರಕ್ಕೆ ಸಡ್ಡು ಹೊಡೆದ ದುವ್ವುರಿ’ ‘ರಿಸರ್ವ್ ಬ್ಯಾಂಕಿನ ಮಹತ್ತರ ನಿಲುವು’

Image

 

Image

 

ಕಳೆದ ಮಂಗಳವಾರ (೩೦.೦೭.೨೦೧೩) ದುವ್ವುರಿ ಸುಬ್ಬಾ ರಾವ್ ಮಗದೊಂದು ಬಾರಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಆರ್‌ಬಿಐಯ ತ್ರೈಮಾಸಿಕ ಸಭೆಯನ್ನು ಮುಗಿಸಿದರು. ತಮ್ಮ ವೆಚ್ಚ ಇಳಿಸಲು ಸದಾ ಬಡ್ಡಿದರಗಳ ಇಳಿಕೆಯನ್ನು ಆಗ್ರಹಿಸುವ ಉದ್ಯೋಗಪತಿಗಳಿಗೆ ಆದ ನಿರಾಸೆ ಅಷ್ಟಿಷ್ಟಲ್ಲ. ಬಡ್ಡಿದರ ಇಳಿಸಿ ಆರ್ಥಿಕ ಪ್ರಗತಿಗೆ ಒತ್ತು ನೀಡುವಲ್ಲಿ ರಿಸರ್ವ್ ಬ್ಯಾಂಕಿನ ಸಹಾಯ ಬಯಸುವ ವಿತ್ತಮಂತ್ರಾಲಯಕ್ಕೂ ಈ ಹೆಜ್ಜೆ ಪಚನವಾಗಿರಲಿಕ್ಕಿಲ್ಲ. ‘ಯಾವುದೇ ಬದಲಾವಣೆ ಇಲ್ಲದ ಈ ರೀತಿ ಮೀಟಿಂಗ್ ಮಾಡುವುದು ಯಾಕೆ? ಬರೇ ಕಾಫಿ-ಚಾ ದಂಡ!’ ಎಂದು ಕೆಲವರು ಕುಹಕವಾಡಿದರು. ಆದರೆ, ಯಾವುದೇ ಬದಲಾವಣೆ ಇಲ್ಲದೆ ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವುದು ಕೂಡಾ ಒಂದು ಮಹತ್ತರ ನಿಲುವು ಎಂಬುದನ್ನು ನಾವು ಮರೆಯಬಾರದು.

ಈ ರೀತಿ ಒಂದು ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಕೆಲವೇ ಕೆಲವು ರಿಸರ್ವ್ ಬ್ಯಾಂಕ್ ಗವರ್ನರರ ಪೈಕಿ ದುವ್ವುರಿ ಸುಬ್ಬಾ ರಾವ್ ಪ್ರಮುಖರು. ತಮ್ಮ ಧೋರಣೆ ಎಷ್ಟೇ ರಾಜಕೀಯ ಒತ್ತಡದಡಿಯಲ್ಲೂ ಬದಲಿಸದೆ, ತಾನು ತಾಂತ್ರಿಕವಾಗಿ ಸರಿ ಎಂದು ನಂಬಿದ್ದನ್ನು ನಿರ್ದಾಕ್ಷಿಣ್ಯವಾಗಿ ಪ್ರತಿಪಾದಿಸುತ್ತಾ, ವಿತ್ತ ಮಂತ್ರಾಲಯದ ಆಡಳಿತಾರೂಢ ಶಕ್ತಿಗಳಿಗೆ ಸಡ್ಡು ಹೊಡೆಯುತ್ತಾ ಓರ್ವ ಸದೃಡ ಅಧಿಕಾರಿ ಎಂದು ಹೆಸರು ಪಡೆದವರು. ಹಲವು ಬಾರಿ ಚಿದಂಬರಂರ ಇಚ್ಚೆಗೆ ವಿರುದ್ಧ ನಿರ್ಣಯ ತೆಗೆದುಕೊಂಡು ಅವರ ಮೂದಲಿಕೆಗೂ ಗುರಿಯಾದ, ಕಾರ್ಪೋರೇಟ್ ಶಕ್ತಿಗಳ ಹಿತಕ್ಕೆ ವಿರುದ್ಧವಾಗಿ ನಡೆದು ಅವರ ಅವಕೃಪೆಗೂ ಪಾತ್ರರಾದ, ತನ್ನ ಕೆಲಸ ಯಾವುದು ಉಳಿದವರ ಕೆಲಸ ಯಾವುದು ಎಂಬ ನಿಲುವು-ಶುದ್ಧತೆಯನ್ನು ಸದಾ ಪ್ರತಿಪಾದಿಸಿದ ಹಾಗೂ ಸರಕಾರವು ಆರ್‌ಬಿಐ ತಲೆಯ ಮೇಲೆ ಗೂಬೆ ಕೂರಿಸುವುದನ್ನು ಒಪ್ಪಿಕೊಳ್ಳದ ದುವ್ವುರಿಯವರ ನಿರ್ಣಯಗಳನ್ನು ನೀವು ಟೀಕೆ ಮಾಡಬಹುದು ಮೆಚ್ಚದಿರಬಹುದು ಆದರೆ ಅವರ ‘ಟೆಕ್ನಿಕಲ್ಲಿ ಕರೆಕ್ಟ್’ ಧೋರಣೆಯನ್ನು ಮತ್ತು ಅದರ ಹಿಂದಿರುವ ಪ್ರಾಮಾಣಿಕತೆಯನ್ನು ಯಾರಾದರೂ ಮೆಚ್ಚಲೇ ಬೇಕು. ಸರಕಾರದ ಕೈಗೊಂಬೆಯಾಗದೆ ಬಡ್ಡಿದರವನ್ನು ಬಡಜನರ ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದಲೇ ನೋಡುತ್ತಾ ನಿರ್ಣಯ ತೆಗೆದುಕೊಳ್ಳುತ್ತಾ ಬಂದವರು. ಅಭಿವೃದ್ಧಿಗಿಂತ ಜಾಸ್ತಿ ಹಣದುಬ್ಬರವನ್ನು ನಿಯಂತ್ರಿಸುವತ್ತ ಜಾಸ್ತಿ ಕಾಳಜಿ ತೆಗೆದುಕೊಂಡವರು. ಮೊನ್ನೆ ಮಂಗಳವಾರ ಗವರ್ನರ್ ಹುದ್ದೆಯಲ್ಲಿ ಅವರು ಕೈಗೊಂಡ ಕೊನೆಯ ತ್ರೈಮಾಸಿಕ ಸಭೆ ಹಾಗೂ ಕೊನೆಯ ಮಹತ್ತರ ನಿರ್ಧಾರ ಯಾಕೆಂದರೆ ಸಧ್ಯದಲ್ಲೆ ಅವರು ಸೆಪ್ಟೆಂಬರ್ ೪ ರಂದು ಈ ಹುದ್ದೆಯಿಂದ ನಿವೃತ್ತರಾಗುವವರಿದ್ದಾರೆ.

ಹಣ ಮತ್ತು ರಿಸರ್ವ್ ಬ್ಯಾಂಕು:

ಸುಬ್ಬಾ ರಾವ್ ಅವರ ಧೋರಣೆ ಮತ್ತು ನಿರ್ಣಯವೈಖರಿಯ ಸರಿಯಾದ ಸ್ವಾದ ದೊರಕಬೇಕಾದರೆ ಆರ್ಥಿಕತೆಯಲ್ಲಿ ರಿಸರ್ವ್ ಬ್ಯಾಂಕಿನ ಪಾತ್ರ, ಹಣದ ಹರಿವು ಮತ್ತು ಬಡ್ಡಿದರಗಳ ಮಹತ್ವದ ಬಗ್ಗೆ ಅರಿತಿರಬೇಕು.

ಗೋಲ್ಡ್ ಸ್ಟಾಂಡರ್ಡ್ ಪದ್ಧತಿಯಲ್ಲಿ ದಾಸ್ತಾನು ಚಿನ್ನದ ಮೌಲ್ಯಕ್ಕೆ ಸಮನಾಗಿ ನೋಟುಗಳನ್ನು ಅಚ್ಚು ಹಾಕಲಾಗುತ್ತಿತ್ತು. ಆದರೆ ಈ ಪದ್ಧತಿಯ ನಿರ್ಗಮನದ ಬಳಿಕ ಜಾಗತಿಕ ಮಟ್ಟದಲ್ಲಿ ಫಿಯಾಟ್ ಪದ್ಧತಿಯಲ್ಲೇ ನೋಟುಗಳನ್ನು ಅಚ್ಚುಹಾಕಲಾಗುತ್ತದೆ. ಅಂದರೆ ನೋಟು ಅಥವಾ ಕರೆನ್ಸಿಯ ಆಧಾರ ದಾಸ್ತಾನು ಚಿನ್ನವಾಗಿರದೆ ಕೇವಲ ಆ ಸರಕಾರದ ಪ್ರಾಮಿಸ್ ಅಥವ ವಚನ ಮಾತ್ರವೇ ಆಗಿದೆ. ನೋಟಿನ ಮೌಲ್ಯ ಅದರ ಸರಕಾರ ಕೊಟ್ಟ ವಾಗ್ದಾನ ಅಥವಾ ಮಾತಿನಿಂದ ಮಾತ್ರ ನಿಗಧಿಯಾಗುತ್ತದೆ. ಈ ಪದ್ಧತಿಯ ಬಳಕೆಯ ಪಥದಲ್ಲಿ ಕರೆನ್ಸಿಯನ್ನು ಪ್ರಿಂಟ್ ಹೊಡೆಯುವ ಪ್ರಕ್ರಿಯೆಯ ಮೆಲೆ ಸರಕಾರಗಳ ಹತೋಟಿ ತಪ್ಪಿತು. ಚಿನ್ನದ ಆಧಾರದ ಅಗತ್ಯ ಇಲ್ಲವಾದ ಕಾರಣ ಬೇಕಾ ಬಿಟ್ಟಿ ಮನ ಬಂದಂತೆ ಖರ್ಚಿಗೆ ಅಗತ್ಯ ಕಂಡ ಹಾಗೆ ಸರಕಾರಗಳು ನೋಟು ಪ್ರಿಂಟ್ ಮಾಡತೊಡಗಿದವು. ಇದರಿಂದಾಗಿ ಕರೆನ್ಸಿಗಳೂ ಒಂದು ಸರಕಾಗಿ ವರ್ತಿಸತೊಡಗಿದವು-ಬೇಡಿಕೆ ಮತ್ತು ಪೂರೈಕೆಯ ಕುಣಿತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ತಮ್ಮ ಮೌಲ್ಯಗಳನ್ನು ಪ್ರದರ್ಶಿಸತೊಡಗಿದವು.

ಕರೆನ್ಸಿ ಸರಕು ಎಂದಾದಂತೆಯೇ ಅದರ ಉತ್ಪಾದನೆ ಮತ್ತು ನಿಯಂತ್ರಣದ ಸೂತ್ರ ಹಿಡಿದಿರುವ ಕೇಂದ್ರೀಯ ಅಥವಾ ರಿಸರ್ವ್ ಬ್ಯಾಂಕುಗಳ ಪಾತ್ರ ಹಿರಿದಾಯಿತು. ಭಾರತೀಯ ರಿಸರ್ವ್ ಬ್ಯಾಂಕು ಕರೆನ್ಸಿಯ ಉತ್ಪಾದನೆ ಮತ್ತು ಹರಿವಿನ ನಿಯಂತ್ರಣವನ್ನು ಕೈಗೆತ್ತಿಕೊಂಡಿತು. ಆರ್ಥಿಕತೆಯ ಸ್ಥಿತಿಗತಿಗಳನ್ನು, ಆರ್ಥಿಕ ಅಭಿವೃದ್ಧಿಯ ಗುರಿ, ಹಣದುಬ್ಬರ, ಹಣದ ಮೌಲ್ಯ/ವಿನಿಮಯ ದರ ಇತ್ಯಾದಿ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಹಣದ ಹರಿವನ್ನು ನಿಯಂತ್ರಿಸುವ ಕೆಲಸ ಅದರದ್ದಾಯಿತು. ರಿಸರ್ವ್ ಬ್ಯಾಂಕ್ ಪ್ರತೀ ೩ ತಿಂಗಳುಗಳಿಗೊಮ್ಮೆ ನಡೆಯುವ ತ್ರೈಮಾಸಿಕ ಸಭೆಯಲ್ಲಿ ಹಣದ ಹರಿವಿಗೆ ಸಂಬಂಧ ಪಟ್ಟಂತಹ ಬಡ್ಡಿ ದರ ಮತ್ತು ಹಣದ ಮೊತ್ತವನ್ನು ನಿರ್ಧರಿಸುವ ಜವಾಬ್ದಾರಿಯೂ ಅದರ ಕಾರ್ಯಸೂಚಿಯೊಳಕ್ಕೆ ಬಂತು.

ಹಣದ ಹರಿವು ಮತ್ತು ಆರ್ಥಿಕತೆ:

ಬಡ್ಡಿ ದರಗಳನ್ನು ರಿಸರ್ವ್ ಬ್ಯಾಂಕು (ಆರ್.ಬಿ.ಐ) ನಿಯಂತ್ರಿಸುತ್ತದೆ. ಮತ್ತು ದೇಶದ ಆರ್ಥಿಕ ವ್ಯವಸ್ಥೆಯನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುವ ಕ್ರಮವಾಗಿ ಅದನ್ನು ಕಾಲಾನುಕ್ರಮ ಏರಿಳಿಸುತ್ತದೆ. ಬ್ಯಾಂಕು ಬಡ್ಡಿದರ ಕಡಿಮೆಯಿದ್ದಲ್ಲಿ ಜನರಿಗೆ ಉಳಿತಾಯ ಮಾಡುವ ಆಸಕ್ತಿ ಕಡಿಮೆಯಾಗುತ್ತದೆ. ಸಾಲ ತೆಗೆದು ಬೇಕಾದ್ದಕ್ಕೆ ಖರ್ಚು ಮಾಡಲು ಪ್ರೋತ್ಸಾಹ ಜಾಸ್ತಿಯಾಗುತ್ತದೆ. ಉದ್ಯಮಿಗಳಿಗೆ ಸುಲಭ ದರದಲ್ಲಿ ಸಾಲ ಸಿಕ್ಕು ಉತ್ಪಾದನಾ ವೆಚ್ಚವೂ ಕಡಿಮೆಯಿರುತ್ತದೆ. ಹಣದ ಹರಿವು ಜಾಸ್ತಿಯಾಗುತ್ತದೆ. ಮಾರುಕಟ್ಟೆಯಲ್ಲಿ ಸರಕುಗಳ ಬೇಡಿಕೆ ಜಾಸ್ತಿಯಾಗಿ ಆರ್ಥಿಕ ಪ್ರಗತಿಯ ಒಟ್ಟೊಟ್ಟಿಗೆ ಬೆಲೆಯೇರಿಕೆ ಕೂಡಾ ಉಂಟಾಗುತ್ತದೆ. ಅದಕ್ಕೆ ಪರಿಹಾರ ಬೇಕಲ್ಲ? ಆಗ ರಿಸರ್ವ್ ಬ್ಯಾಂಕು ರಿವರ್ಸ್ ಬ್ಯಾಂಕು ಆಗುತ್ತದೆ! ಎಲ್ಲವೂ ಮೊದಲಿನ ತದ್ವಿರುದ್ದ! ಬಡ್ಡಿದರವನ್ನು ಏರಿಸಿ ಜನರಲ್ಲಿ ಉಳಿತಾಯದ ಆಸಕ್ತಿ ಕುದುರಿಸಿ, ಸಾಲವನ್ನು ದುಬಾರಿಯಾಗಿಸಿ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿ ಹಣದ ಹರಿವನ್ನು ಕುಂಠಿತಗೊಳಿಸುವುದು. ಸರಕುಗಳ ಬೇಡಿಕೆ ಕಡಿಮೆಯಾಗಿ ಬೆಲೆಯೇರಿಕೆ ಕಡಿಮೆಯಾಗುವುದಾದರೂ ಜೊತೆ ಜೊತೆಗೆ ಆರ್ಥಿಕ ಪ್ರಗತಿಯೂ ಕಡಿಮೆಯಾಗುವುದು.

ಹೀಗೆ ರಿಸರ್ವ್ ಬ್ಯಾಂಕು, ಹಣದ ಹರಿವನ್ನು ಹೆಚ್ಚು ಕಡಿಮೆ ಮಾಡಲು ಬಡ್ಡಿದರವನ್ನು ಏರಿಳಿಸುತ್ತಾ ಇರುತ್ತದೆ. ಆರ್ಥಿಕ ಪ್ರಗತಿಗಾಗಿ ಶ್ರಮಿಸುತ್ತಾ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತಾ, ಹಣದ ಮೌಲ್ಯವನ್ನು ಸರಿದೂಗಿಸುತ್ತಾ ಹೋಗುತ್ತದೆ. ಇದನ್ನು ಆರ್.ಬಿ.ಐ ತ್ರೈಮಾಸಿಕ ಹಣಕಾಸಿನ ನೀತಿಯಾಗಿ ಪ್ರಕಟಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹಣಕಾಸು ನೀತಿಯಲ್ಲಿ ಸರಕಾರ ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿದರ (ರಿಪೋ ರೇಟ್) ಸರಕಾರ ಬ್ಯಾಂಕುಗಳಿಂದ ಡೆಪಾಸಿಟ್ ಪಡೆಯುವ ಬಡ್ಡಿದರ (ರಿವರ್ಸ್ ರಿಪೋ ರೇಟ್) ಗಳನ್ನು ಪ್ರಕಟಿಸುತ್ತದೆ. ಅದಲ್ಲದೆ ಸಿಆರ್‌ಆರ್ (ಕ್ಯಾಶ್ ರಿಸರ್ವ್ ರೇಶಿಯೋ) ಅಂದರೆ ಬ್ಯಾಂಕುಗಳು ರಿಸರು ಬ್ಯಾಂಕಿನಲ್ಲಿ ನಗದನ್ನು ಮೀಸಲಾಗಿ ಇಡುವ ಅನುಪಾತವನ್ನು ಕೂಡ ಪ್ರಕಟಿಸುತ್ತದೆ. ರಿಪೋ ರೇಟ್ ಏರಿದಂತೆ ಸಾಲದ ವೆಚ್ಚ ಜಾಸ್ತಿಯಾಗಿ ಅದರ ಮೇಲಿನ ಬೇಡಿಕೆ ಕಡಿಮೆಯಾಗಿ ಹಣದ ಹರಿವು ಕಡಿಮೆಯಾಗುತ್ತದೆ ಹಾಗೂ ಸಿಆರ್‌ಆರ್ ಹೆಚ್ಚಳವಾದಂತೆ ಕೂಡಾ ಪ್ರತ್ಯಕ್ಷವಾಗಿ ಹಣದ ಹರಿವು ಕಡಿಮೆಯಾಗುತ್ತದೆ. ಸದ್ಯಕ್ಕೆ ರಿಪೋ ರೇಟ್ ೭.೨೫% ಹಾಗೂ ಸಿಆರ್‌ಆರ್ ೪% ಮಟ್ಟದಲ್ಲಿದೆ ಹಾಗೂ ಕಳೆದ ವಾರದ ಮೀಟಿಂಗಿನಲ್ಲಿ ದುವ್ವುರಿ ಅದರಲ್ಲಿ ಯಾವುದೇ ಬದಲಾವಣೆಯನ್ನೂ ತರಲಿಲ್ಲ.

ರುಪಿ ಮೌಲ್ಯದ ಬಿಕ್ಕಟ್ಟು:

ಇತ್ತೀಚೆಗಿನ ದಿನಗಳಲ್ಲಿ ನಮ್ಮ ದೇಶವನ್ನು ಬಹಳ ಗಾಡವಾಗಿ ಕಾಡುತ್ತಿರುವ ಇನ್ನೊಂದು ಸಮಸ್ಯೆಯೆಂದರೆ ರುಪಾಯಿ ಬೆಲೆ. ಡಾಲರ್ ಎದುರುಗಡೆ ರುಪಾಯಿಯ ಮೌಲ್ಯ ಕುಸಿದು ೬೦ ರ ಗಡಿ ದಾಟಿದೆ ಇದಕ್ಕೆ ಸಿಎಡಿ (ಕರೆಂಟ್ ಅಕೌಂಟ್ ಡೆಫಿಸಿಟ್) ಅಥವಾ ಚಾಲ್ತಿ ಖಾತೆಯ ಕೊರತೆ ಇದಕ್ಕೆ ಮುಖ್ಯ ಕಾರಣ.

ಚಾಲ್ತಿ ಖಾತೆ ಕೊರತೆ (ಸಿಎಡಿ)

ಭಾರತ ತನ್ನ ಹೊರ ದೇಶಗಳೊಡನೆ ನಡೆಸುವ ವಿದೇಶಿ ವ್ಯವಹಾರಗಳ ಖಾತೆಯನ್ನು ಎರಡು ರೀತಿಯಾಗಿ ವಿಂಗಡಿಸಿದ್ದಾರೆ. ಕ್ಯಾಪಿಟಲ್ ಅಕೌಂಟ್ (ಬಂಡವಾಳ ಖಾತೆ) ಹಾಗೂ ಕರೆಂಟ್ ಅಕೌಂಟ್ (ಚಾಲ್ತಿ ಖಾತೆ). ದೇಶಕ್ಕೆ ಬರುವ ಮತ್ತು ಹೋಗುವ ದುಡ್ಡು ಸಂದರ್ಭಾನುಸಾರ ಈ ಎರಡು ರೀತಿಯ ಖಾತೆಗಳ ಮೂಲಕವೇ ಒಳ/ಹೊರ ಹರಿಯಬೇಕು. ಹೂಡಿಕೆಗಾದರೆ ಕ್ಯಾಪಿಟಲ್ ಖಾತೆ ಮತ್ತು ಇನ್ನಿತರ ವ್ಯವಹಾರಕ್ಕಾದರೆ ಚಾಲ್ತಿ ಖಾತೆ.

ಇಲ್ಲಿ ಮುಖ್ಯವಾದ ವಿಚಾರವೇನೆಂದರೆ ದೇಶದ ಒಳ ಬರುವ ಡಾಲರ್ ಅಥವ ಇತರ ಯಾವುದೇ ವಿದೇಶಿ ಕರೆನ್ಸಿ ಈ ಖಾತೆಗಳಿಗೆ ಬಿದ್ದ ಕೂಡಲೇ ರುಪಾಯಿಯಾಗಿ ಬದಲಾಗಿಯೇ ನಮ್ಮ ಬ್ಯಾಂಕ್ ಖಾತೆಗಳಿಗೆ ಪ್ರವೇಶಿಸುತ್ತವೆ. ಹಾಗೂ ದೇಶದ ಹೊರಕ್ಕೆ ಯಾವುದೇ ಪಾವತಿ ಮಾಡಬೇಕಾದರೂ ವಿದೇಶಿ ಕರೆನ್ಸಿಗಳಾಗಿಯೇ ಹೊರ ಹೋಗುತ್ತವೆ.

ಬಂಡವಾಳ ಖಾತೆಯಲ್ಲಿ ಈ ವಿನಿಮಯದ ದರವನ್ನು ಆರ್‌ಬಿಐ ನಿಯಂತ್ರಿಸುತ್ತದೆ. ಆದರೆ ಚಾಲ್ತಿ ಖಾತೆಯಲ್ಲಿ ಈ ವಿನಿಮಯ ದರ (೧ ಡಾಲರ್= ಇಷ್ಟು ರುಪಾಯಿ) ಆಮದಿನಿಂದಾಗಿ ಉಂಟಾಗುವ ಡಾಲರ್ ಬೇಡಿಕೆ ಮತ್ತು ರಫ್ತಿನಿಂದ ಉಂಟಾಗುವ ಡಾಲರ್ ಪೂರೈಕೆಯನ್ನು ಹೊಂದಿಕೊಂಡು ಯಾವತ್ತೂ ಏರಿಳಿಯುತ್ತದೆ. ಡಾಲರ್ ಒಳಹರಿವು ಕಡಿಮೆಯಾಗಿ ಅಥವಾ ಹೊರ ಹರಿವು ಜಾಸ್ತಿಯಾದರೆ ರುಪಾಯಿ ಬೆಲೆ ಕಳೆದುಕೊಳ್ಳುತ್ತದೆ; ವಿನಿಮಯ ದರದಲ್ಲಿ ಏರಿಕೆಯಾಗುತ್ತದೆ. ಒಂದು ಡಾಲರಿಗೆ ಜಾಸ್ತಿ ರುಪಾಯಿಗಳು ಸಿಗುತ್ತದೆ. ಹಾಗೂ ಡಾಲರ್ ಒಳಹರಿವು ಜಾಸ್ತಿಯಾಗಿ ಅಥವಾ ಹೊರ ಹರಿವು ಕಡಿಮೆಯಾದರೆ ರುಪಾಯಿಯ ಬೆಲೆ ವೃದ್ಧಿಸುತ್ತದೆ ಅಂದರೆ ವಿನಿಮಯ ದರದಲ್ಲಿ ಇಳಿಕೆಯಾಗುತ್ತದೆ. ಒಂದು ಡಾಲರಿಗೆ ಕಡಿಮೆ ರುಪಾಯಿಗಳು ಸಿಗುತ್ತವೆ.
ಈ ರೀತಿ ನಿರ್ಣಯವಾಗುವ ವಿನಿಮಯ ದರವೇ ಎಲ್ಲಾ ವ್ಯವಹಾರಕ್ಕೂ ಭಾದಿತವಾಗುತ್ತದೆ. ಅಂದರೆ ಏರುತ್ತಿರುವ ವಿನಿಮಯ ದರ ಅಂದರೆ ಇಳಿಯುತ್ತಿರುವ ರುಪಾಯಿ ಮೌಲ್ಯ ರಫ್ತುದಾರರಿಗೆ ಸಹಾಯವಾಗುತ್ತದೆ ಅವರಿಗೆ ಈಗ ಅವರು ಗಳಿಸಿದ ಅದೇ ಡಾಲರಿಗೆ ಜಾಸ್ತಿ ರುಪಾಯಿ ಸಿಗುತ್ತದೆ ಆದರೆ ಇದು ಆಮದುದಾರರಿಗೆ ಭಾರಿ ದೊಡ್ಡ ಪೆಟ್ಟು. ಅದೇ ಡಾಲರಿಗೆ ಜಾಸ್ತಿ ರುಪಾಯಿ ಕೊಟ್ಟು ಕೊಳ್ಳಬೇಕಾಗುತ್ತದೆ. ಅಂತೆಯೇ ಇಳಿಯುತ್ತಿರುವ ವಿನಿಮಯ ದರ ಅಂದರೆ ಏರುತ್ತಿರುವ ರುಪಾಯಿ ಮೌಲ್ಯ ಆಮದುದಾರರಿಗೆ ಸಹಾಯವಾಗುತ್ತದೆ ಆದರೆ ರಫ್ತುದಾರರಿಗೆ ಪೆಟ್ಟು. ಅದೇ ಡಾಲರಿಗೆ ಕಡಿಮೆ ರುಪಾಯಿ ಸಿಗುತ್ತದೆ.

ನಮ್ಮ ದೇಶದಲ್ಲಿ ಆಮದು ಜಾಸ್ತಿ ಹಾಗೂ ರಫ್ತು ಕಡಿಮೆ. ಇದರಿಂದ ಚಾಲ್ತಿ ಖಾತೆಯಲ್ಲಿ ಜಾಸ್ತಿ ಕೊರತೆ ಉಂಟಾಗಿ ವಿನಿಮಯ ದರ ಏರುತ್ತದೆ. ಕಳೆದ ಡೆಸೆಂಬರ್‌ನಲ್ಲಿ ಕೊರತೆ ದೇಶೀಯ ಉತ್ಪನ್ನದ (ಜಿಡಿಪಿ) ೬.೭% ವರೆಗೆ ಏರಿತ್ತು. ಆ ಫಲವಾಗಿ ಈಗ ವಿನಿಮಯ ದರ ಏರಿಬಿಟ್ಟು ಡಾಲರ್ ಒಂದರ ಸುಮಾರು ರೂ ೬೦ ಕ್ಕೆ ಬಂದು ನಿಂತಿದೆ. ಹಾಗಾಗಿ ಅದು ಎಲ್ಲಾ ಆಮದಿತ ಸರಕುಗಳ ವೆಚ್ಚವನ್ನೂ ಏರಿಸುತ್ತದೆ. ಇದು ದೇಶದೊಳಗೆ ಬೆಲೆಯೇರಿಕೆಯ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ತೈಲ, ಚಿನ್ನ ಮತ್ತು ಕೆಮಿಕಲ್ಸ್ ಇವು ನಮ್ಮ ಮುಖ್ಯ ಆಮದಿತ ಸರಕುಗಳು ಮತ್ತು ಅವುಗಳ ಬೆಲೆ ವಿನಿಮಯದರಕ್ಕೆ ಅನುಸಾರವಾಗಿ ಏರಿಳಿಯುತ್ತವೆ. ಪ್ರತಿ ಡಾಲರಿಗೆ ಜಾಸ್ತಿ ರುಪಾಯಿ ತೆರುವುದರಿಂದಾಗಿ ಡಾಲರ್ ಬೆಲೆಯಲ್ಲಿ ಕೊಳ್ಳುವ ಎಲ್ಲಾ ಆಮದಿತ ಸರಕುಗಳ ಬೆಲೆ ಹೆಚ್ಚಳವಾಯಿತು. ತೈಲ, ಕೆಮಿಕಲ್ಸ್, ಇತ್ಯಾದಿ ಸರಕುಗಳ ಬೆಲೆ ಏರಿಕೆಯಿಂದ ಒಟ್ಟಾರೆ ಆರ್ಥಿಕತೆಯಲ್ಲಿ ಸರ್ವ ಸರಕುಗಳ ಬೆಲೆಗಳೂ ಏರತೊಡಗಿವೆ. ಈ ಹಣದುಬ್ಬರ ಆರ್ಥಿಕತೆಗೆ ಬಹಳ ಕೆಟ್ಟದ್ದು ಎನ್ನುವ ಹಿನ್ನೆಲೆಯಲ್ಲಿ ರುಪಾಯಿ ಮೌಲ್ಯದ ಏರಿಕೆ ಅನಿವಾರ್ಯವಾಗಿ ರಿಸರ್ವ್ ಬ್ಯಾಂಕಿನ ತಲೆತಿನ್ನತೊಡಗಿದೆ.

ಇದನ್ನು ನಿಯಂತ್ರಿಸುವ ಸಲುವಾಗಿ ರಿಸರ್ವ್ ಬ್ಯಾಂಕು ರುಪಾಯಿ ಪೂರೈಕೆಯಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿತು. ಮೊತ್ತ ಮೊದಲನೆಯದಾಗಿ ಸಿಎಡಿ ಕೊರತೆ ನೀಗುವ ಸಲುವಾಗಿ ಚಿನ್ನದ ಆಮದಿನ ಮೇಲೆ ನಿರ್ಬಂಧ ಹೇರಿತು. ಚಿನ್ನದ ಮೇಲಿನ ಸಾಲಕ್ಕೆ ಹಾಗೂ ಸಾಲ ಮಾಡಿ ಚಿನ್ನಖರೀದಿ ಇತ್ಯಾದಿಗಳ ಮೇಲೆ ನಿರ್ಬಂಧ ಹೇರಿತು. ಅದಲ್ಲದೆ, ರುಪಾಯಿಯ ಹರಿವನ್ನು ಕುಂಟಿತಗೊಳಿಸಿದರೆ ಅದು ದುರ್ಲಭವಾಗಿ ಡಾಲರ್ ಕೊಳ್ಳುವ ಮತ್ತು ಡಾಲರ್ ಬೆಲೆಯ ಮೇಲೆ ಸಟ್ಟಾ ಕಟ್ಟುವ ಚಟುವಟಿಕೆಗಳನ್ನು ನಿಯಂತ್ರಿಸುವುದು ಸಾಧ್ಯ ಎನ್ನುವ ತತ್ವದ ಆಧಾರದಲ್ಲಿ ಕೆಲ ನಿರ್ಬಂಧಗಳನ್ನು ಹಾಕಿತು. ಅಷ್ಟೇ ಅಲ್ಲದೆ ಈ ನಿರ್ಬಂಧಗಳು ಯಶಸ್ವಿಯಾಗಿ ಕೆಲಕಾಲವಾದರೂ ರುಪಾಯಿ ಮೌಲ್ಯದ ಕುಸಿತವನ್ನು ತಡೆಯಿತು.

ಆದರೆ ಈ ಮೀಟಿಂಗಿನಲ್ಲಿ ರುಪಿ ಮೌಲ್ಯದ ಕುಸಿತ ತಡೆಯಲು ಡಾಲರ್ ಖರೀದಿ ಇಳಿಸಲು ಆರ್‌ಬಿಐ ರುಪಾಯಿಯ ಪೂರೈಕೆಗೆ ಕಡಿವಾಣಹಾಕಿ ತಾತ್ಕಾಲಿಕ ಚಿಕಿತ್ಸೆ ನೀಡಬಹುದು. ಆದರೆ, ಈ ಸಮಸ್ಯೆಯ ಸಂಪೂರ್ಣ ವಾಸಿ ಮಾಡುವುದು ಸಿಎಡಿಯ ಅಭಿವೃದ್ಧಿ ಮೂಲಕ ವಿತ್ತ ಮಂತ್ರಾಲಯದಿಂದ ಮಾತ್ರ ಸಾಧ್ಯ. ನಮ್ಮೆಡೆಯಿಂದ ಹೇರಿದ ಕಡಿವಾಣಗಳನ್ನು ನಿಧಾನವಾಗಿ ಹಿಂತೆಗೆಯಲಾಗುವುದು ಎಂಬ ಸ್ಪಷ್ಟ ವಾದ ಮತ್ತು ಸರಿಯಾದ ನಿಲುವು ತಳೆದರು. ಹಣದ ಹರಿವಿಗೆ ಕಡಿವಾಣ ಹೇರಿದ್ದರಿಂದ ಪ್ರಗತಿಯ ಗುರಿಯನ್ನು ೫.೭% ರಿಂದ ೫.೫% ಕ್ಕೆ ಇಳಿಸಿದರು. ಇಂತಹ ನಿರ್ದಾಕ್ಷಿಣ್ಯವಾದ ಯಾವುದೇ ರಾಜಕಾರಣ ಇಲ್ಲದ ಮಾತು ಬರುತ್ತಲೇ ರುಪಾಯಿ ಶೇರು ಕಟ್ಟೆ ಇರಡೂ ಮತ್ತೆ ಕುಸಿಯಿತು.

ದುವ್ವುರಿ ಧೋರಣೆ:

ಒಟ್ಟಾರೆ ಹೇಳುವುದಾದರೆ ರಿಪೋ ರೇಟನ್ನು ಸತತವಾಗಿ ೧೩ ಬಾರಿ ಏರಿಸಿ ಬೆಲೆಯೇರಿಕೆಯ ನಿಯಂತ್ರಣಕ್ಕೆ ಪಟತೊಟ್ಟು ನಿಂತರು. ಉದ್ಯೋಗ/ಕಾರ್ಪೋರೇಟ್ ವಲಯಕ್ಕೆ ಬಡ್ಡಿದದರ ಹೆಚ್ಚಳ ಜನಪ್ರಿಯ ವಿಷಯವಲ್ಲವಾದರೂ ಜನಸಾಮಾನ್ಯನ ಹಿತದೃಷ್ಟಿಯಿಂದ ರಿಪೋ ರೇಟ್ ಏರಿಸಿ ಆರ್ಥಿಕಾಭಿವೃದ್ಧಿಯನ್ನು ಕಡೆಗಣಿಸಿ ಹಣದುಬ್ಬರದ ಹತೋಟಿಗೆ ಪ್ರಾಶಸ್ತ್ಯ ನೀಡಿ ಯಶಸ್ವಿಯೂ ಆದರು. ರುಪಿ ಮೌಲ್ಯ ಕುಸಿದಾಗಲೂ ಜನಸಾಮಾನ್ಯನಿಗೆ ತೊಂದರೆಯಾಗಬಾರದು ಎಂದು ಚಿನ್ನದ ಆಮದಿಗೆ ಕಡಿವಾಣ ಹಾಕಿ ಡಾಲರ್ ಮೇಲಿನ ಸಟ್ಟಾಕ್ಕೆ ಹಣ ಕಡಿಮೆಯಾಗುವಂತಹ ಹೆಜ್ಜೆ ತೆಗೆದುಕೊಂಡಿದ್ದಾರೆ. ವಿತ್ತ ಮಂತ್ರಿ, ಪ್ಲಾನಿಂಗ್ ಕಮಿಶನ್‌ಗಳ ಮಾತಿಗೆ ತಾಳ ಹಾಕುವ ಪರಿಪಾಠ ಬಿಟ್ಟು ಓರ್ವ ಗವರ್ನರ್ ಆಗಿ ಸ್ವಂತ ಧೋರಣೆ ಮೆರೆದು ತನ್ನ ಸ್ಥಾನದ ಘನತೆ ಹೆಚ್ಚಿಸಿದ್ದಾರೆ. ಶೀಘ್ರವಾಗಿ ನಿವೃತ್ತರಾಗಲಿರುವ ದುವ್ವರಿ ತನ್ನ ಪ್ರಭಲ ಛಾಪುಳ್ಳ ಯಾವುದೇ ರಾಜಕೀಯತೆ ಇಲ್ಲದ ಶುದ್ಧ ತಾಂತ್ರಿಕ ಕಾರ್ಯವೈಖರಿಯಿಂದ ಓರ್ವ ನೆನಪಿನಲ್ಲುಳಿಯುವ ಗವರ್ನರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
***

ನಿಮ್ಮ ಟಿಪ್ಪಣಿ ಬರೆಯಿರಿ