0% ಬಡ್ಡಿದರದ ಒಳಗುಟ್ಟು (ಉದಯವಾಣಿ, ಐಸಿರಿ, 1.10.2013)

ಕೆಲವು ತಿಂಗಳುಗಳಿಂದ ಒಂದು ಸೂಪರ್ ಆದ ಮೊಬಾಯಿಲ್ ಖರೀದಿಸಬೇಕೆಂದು ನೀವು ಸ್ಕೆಚ್ ಹಾಕುತ್ತಾ ಕುಳಿತಿದ್ದೀರಿ. ಒಂದೆರಡು ಮಾಡೆಲ್‌ಗಳ ಬಗ್ಗೆ ಸ್ನೇಹಿತರಿಂದ ತಿಳಿದುಕೊಂಡು ಖರೀದಿಗೆಂದು ಈಗ ಶೋ ರೂಮ್ ಒಂದರೊಳಗೆ ಬಂದು ನಿಂತಿದ್ದೀರಿ. ಸೇಲ್ಸ್‌ಹುಡುಗಿ ನಿಮಗೆ ವಿವಿಧ ಮಾಡೆಲ್ಲುಗಳನ್ನು ತೋರಿಸಿದ್ದಾಗಿದೆ. ನೀವು ಅವೆಲ್ಲವನ್ನೂ ಅಳೆದೂ ತೂಗಿ ನೀವು ಮೊದಲೇ ಯೋಚಿಸಿಕೊಂಡುಬಂದಿದ್ದ ಮಾಡೆಲ್ ಬಿಟ್ಟು ಬೇರೊಂದು ಹೊಸ ಮಾಡೆಲ್ ಖರೀದಿಸುವುದಕ್ಕೆ ಅರೆಮನಸ್ಸು ಮಾಡಿದ್ದಾಗಿದೆ. ಆದ್ರೆ ಅದು ದುಬಾರಿ; ಒಂದೇ ಸಲಕ್ಕೆ ಅಷ್ಟು ದುಡ್ಡು ಕೋಡ್ಬೇಕಲ್ವಾ ಅಂತ ಮನಸ್ಸು ಊಯ್ಯಾಲೆ ಆಡ್ಲಿಕ್ಕೆ ಸ್ಟಾರ್ಟ್ ಮಾಡುತ್ತದೆ. ಎನಾದರು ಡಿಸ್ಕೌಂಟ್ ಸಿಗಬಹುದೇ ಎಂದು ಒಳಗೊಳಗೇ ಆಸೆ ಪುಟಿಯುತ್ತಿದೆ. ‘ಏನ್ ಮೇಡಂ ಎನಾದ್ರೂ ಡಿಸ್ಕೌಂಟ್ ಸಿಗ್ಬೋದಾ?’ ಅಂತ ಬಾಯಿ ಬಿಟ್ಟು ಕೇಳಿದ್ದೂ ಆಯಿತು.

ಈಗ ಸಂಭವಿಸುವ ಘಟನೆ ನಿಮ್ಮನ್ನು ಇನ್ನೊಂದು ಲೋಕಕ್ಕೆ ಎಳೆದೊಯ್ಯುತ್ತದೆ.

“ಜ಼ೀರೋ ಪರ್ಸೆಂಟ್ ಬಡ್ಡಿಯಲ್ಲಿ ಈಯೆಮ್ಮೈ ಸಿಗತ್ತೆ ಸಾರ್; ಕ್ರೆಡಿಟ್ ಕಾರ್ಡ್ ಯೂಸ್ ಮಾಡೋದಿದ್ರೆ’ ಅಂತ ಮೇಡಂ ಉಲಿಯುತ್ತಾಳೆ.

ಈಯೆಮ್ಮೈ (Equated Monthly Installments) ಅಂದ್ರೆ ಮಾಡಿದ ಸಾಲವನ್ನು ಸಮಾನ ಮೊತ್ತದ ಮಾಸಿಕ ಕಂತುಗಳಲ್ಲಿ ತೀರಿಸುವುದು ಅಂತ ನಿಮಗೆ ಗೊತ್ತು ಆದರೆ ವಾಸ್ತವದಲ್ಲಿ ಈ ‘ಜ಼ೀರೋ ಬಡ್ಡಿಯ ಈಯೆಮ್ಮೈ’ ಭಾಷೆ ನಿಮಗೆ ಅರ್ಥವಾಗಿರುವುದಿಲ್ಲ. ಏನೂ ಗೊತ್ತಿಲ್ಲದ ಗುಗ್ಗು ಅಂತ ತೋರಿಸಿಕೊಳ್ಳಲೂ ನಿಮಗೆ ಇಷ್ಟ ಇರುವುದಿಲ್ಲ. “ಅಂದ್ರೆ ಬಡ್ಡೀ ಇಲ್ದೆ ಲೋನ್ ಸಿಗತ್ತಾ?” ಅಂತ ಒಂದು ಸಾಮಾನ್ಯ ಪ್ರಶ್ನೆ ಎಸೆಯುತ್ತೀರಿ.

“ಹೌದು ನೋ ಇಂಟರೆಸ್ಟ್. ಈ ಮೊಬಾಯಿಲ್ ಬೆಲೆ ೨೦ ಸಾವ್ರ. ಆರು ತಿಂಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಕಂತು ಕಂತಾಗಿ ಕಟ್ಟಿದ್ರೆ ಸಾಕು. ಹೆಚ್ಚುವರಿ ಬಡ್ಡಿ ಏನೂ ಇಲ್ಲ. ಪ್ರಾಸೆಸ್ಸಿಂಗ್ ಫೀಸ್ ಅಂತ ೧ ಸಾವ್ರ ಇದೆ. ಒಟ್ಟೂ ೨೧ ಸಾವ್ರ. ಅದನ್ನ ೬ ತಿಂಗಳಲ್ಲಿ ತಿಂಗಳಿಗೆ ೩೫೦೦ ರೂಪಾಯಿ ತರ ಕೊಟ್ರೆ ಆಯ್ತು. ನಿಮ್ಗೂ ಸುಲಭ. ನಷ್ಟ ಏನೂ ಇಲ್ಲ” ಅಂತ ಮೇಡಂ ವಿವರಣೆ ಕೊಡ್ತಾರೆ.
ಇದು ಒಂದು ಉತ್ತಮ ಆಯ್ಕೆ ಎಂದು ನಿಮಗೆ ಒಡನೆಯೇ ಅನಿಸುತ್ತದೆ. ಒಂದೇ ಬಾರಿ ಅಷ್ಟು ದುಡ್ಡು ಯಾಕೆ ಕೊಡಬೇಕು? ಆರು ತಿಂಗಳುಗಳಲ್ಲಿ ನಿಧಾನವಾಗಿ ಸುಲಭ ಕಂತುಗಳಲ್ಲಿ ಕೊಟ್ರೆ ಆಯ್ತಲ್ವ ಅಂತ ನಿಮ್ಮ ಉಯ್ಯಾಲೆ ಮನಸ್ಸು ನಿಮಗೆ ತನ್ನ ನಿರ್ಧಾರ ತಿಳಿಸುತ್ತದೆ.

ಅಂತೆಯೇ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಝಳಪಿಸಿ ಜ಼ೀರೋ ಬಡ್ಡಿದರ ಸ್ಕೀಮಿನಲ್ಲಿ ಆರು ತಿಂಗಳಲ್ಲಿ ಪಾವತಿ ಮಾಡುವಂತಹ ಲೋನ್ ಪಡೆದುಕೊಂಡು ನಿಮ್ಮ ನೆಚ್ಚಿನ ಮೊಬಾಯಿಲು ಖರೀದಿಸಿ ಮೇಡಮ್ಮಿಗೆ “ಥಾಂಕ್ಯೂ. ಬಾಯ್, ಬಾಯ್” ಹೇಳಿ ಅಂಗಡಿಯಿಂದ ಹೊರಗಡಿ ಇಡುತ್ತೀರಿ.

ಶೂನ್ಯ ದರದ ಶೂನ್ಯತ್ವ:

ಅದು ನಡೆದ ಘಟನೆ. ಇದೀಗ ಅದರ ವಿಶ್ಲೇಷಣೆ:

ನೀವು ರೂ ೨೦,೦೦೦ ಬೆಲೆಯ ಒಂದು ಮೊಬಾಯಿಲ್ ಕೊಂಡಿದ್ದೀರಿ ಅಲ್ಲವೇ? ಆದರೆ ಆವರು ಅದಕ್ಕೆ ಕ್ರೆಡಿಟ್ ಕಾರ್ಡಿನ ಕಂಪೆನಿಯಿಂದ ಪಡೆಯುವುದು ರೂ ೧೮೦೦೦ ಮಾತ್ರ – ೧೦% ಕಡಿಮೆ! ಅಂದರೆ ಮೊಬಾಯಿಲಿನ ನಿವ್ವಳ ಬೆಲೆ ಕೇವಲ ರೂ ೧೮೦೦೦ ಮಾತ್ರ. ನೇರವಾಗಿ ಸ್ಥಳದಲ್ಲೇ ನಗದು ಕೊಟ್ಟಿದ್ದರೆ ನಿಮಗೇನೇ ಆ ೧೦% ಕ್ಯಾಶ್ ಡಿಸ್ಕೌಂಟ್ ಸಿಗುತ್ತಿತ್ತು; ಸಿಗಬೇಕು. ಆದರೆ ಕ್ರೆಡಿಟ್ ಕಾರ್ಡ್ ಉಪಯೋಗಿಸುವವರಿಗೆ ಈ ೧೦% ಡಿಸ್ಕೌಂಟ್ ಲಭ್ಯವಿಲ್ಲ. ಆದರೆ ಶೂನ್ಯ ಬಡ್ಡಿದರದ ಹೆಸರಿನಲ್ಲಿ ೬ ತಿಂಗಳ ಮಾಸಿಕ ಕಂತುಗಳ ಸ್ಕೀಮ್ ಲಭ್ಯವಿದೆ. ಅದಕ್ಕಾಗಿ ಪ್ರಾಸೆಸ್ಸಿಂಗ್ ಫೀಸ್ ರೂ ೧೦೦೦ ಪ್ರತ್ಯೇಕ. ಅಂದರೆ ರೂ ೧೮೦೦೦ ಮೊಬಾಯಿಲಿಗೆ ೬ ತಿಂಗಳಲ್ಲಿ ನೀವು ತಿಂಗಳಿಗೆ ೩೫೦೦ ದಂತೆ ಒಟ್ಟು ರೂ ೨೧೦೦೦ ಕೊಟ್ಟಂತೆ. ಇದು ರೂ ೧೮೦೦೦ ದ ವಸ್ತುವಿಗೆ ಆರು ತಿಂಗಳಲ್ಲಿ ಒಟ್ಟು ರೂ ೩೦೦೦ ಹೆಚ್ಚುವರಿ ಪಾವತಿ ಮಾಡಿದಂತಾಗುತ್ತದೆ. ಇದು ನೈಜವಾಗಿ ೧೬.೬೬% ಬಡ್ಡಿ ಅಂದರೆ ವಾರ್ಷಿಕ ೩೩.೩೩% ಬಡ್ಡಿದರ ಆಗುತ್ತದೆ.
ಇಲ್ಲಿ ಬ್ಯಾಂಕು ಅಂಗಡಿಯಾತನಿಗೆ ಖರೀದಿಯ ಸಂದರ್ಭದಲ್ಲಿ ರೂ ೧೮೦೦೦ ಮಾತ್ರವೇ ನೀಡುತ್ತದೆ. ಅದರ ಮೇಲಣ ಬಡ್ಡಿ ಮತ್ತು ಪ್ರಾಸೆಸ್ಸಿಂಗ್ ವೆಚ್ಚವಾದ ಒಟ್ಟು ರೂ ೩೦೦೦ ವನ್ನು ನಿಮ್ಮಿಂದ ತನ್ನ ವೆಚ್ಚವಾಗಿ ಸ್ವೀಕರಿಸುತ್ತದೆ. ಹಾಗಾಗಿ ಇಲ್ಲಿ ಬ್ಯಾಂಕು ನಿಜವಾಗಿಯೂ ಶೂನ್ಯ ಬಡ್ಡಿದರದಲ್ಲಿ ನಿಮಗೆ ಕ್ರೆಡಿಟ್ ನೀಡಿಲ್ಲ. ಬೇರೆಲ್ಲಾ ಸಾಮಾಗ್ರಿಗಳಿಗೆ ಅನ್ವಯವಾಗುವಂತಹ ೩೩% ದ ದುಬಾರಿ ಬಡ್ಡಿದರವನ್ನು ಇಲ್ಲೂ ವಿದಿಸಲಾಗಿದೆ. ನಿಮಗೆ ಸಿಗಬಹುದಾಗಿದ್ದ ಡಿಸ್ಕೌಂಟನ್ನು ನಿಮಗೆ ಕೊಡದೆ ಅದರಲ್ಲಿಯೇ ನಿಮ್ಮ ಬಡ್ಡಿಯನ್ನು ಹಿಡಿದಿಟ್ಟುಕೊಂಡು ನಿಮ್ಮನ್ನು ಸರಕು ಖರೀದಿಸುವಂತೆ ಆಕರ್ಷಿಸಲಾಗಿದೆ. ಶೂನ್ಯ ಬಡ್ಡಿ ಎಂದು ತಿಳಿದಿದ್ದ ನೀವು ನಿಜವಾಗಿ ತೆತ್ತದ್ದು ೩೩% ಬಡ್ಡಿ !!

ಹಾಗಾಗಿ, ‘ಶೂನ್ಯ ದರದ ಈಯೆಮ್ಮೈ’ ಎಂದು ಜಾಹೀರಾತು ನೀಡುವುದು ತಪ್ಪಲ್ಲವೇ?. ಹೌದು ಎಂದಾದರೆ ರಿಸರ್ವ್ ಬ್ಯಾಂಕಿನ ಹೊಸ ಗವರ್ನರ್ ರಘುರಾಮ್ ರಾಜನ್ ಕೂಡಾ ಅದನ್ನೇ ಹೇಳಿದ್ದು.

ರಘುರಾಮ್ ರಾಜನ್ ಬಂದು ರಿಸರ್ವ್ ಬ್ಯಾಂಕಿನ ಸೂತ್ರ ಹಿಡಿದುಕೊಂಡ ಮೇಲೆ ಅವ್ಯವಸ್ಥೆಗೆ ಒಂದೊಂದಾಗಿ ಚುರುಕು ಮುಟ್ಟಿಸುತ್ತಾ ಇದ್ದಾರೆ. ಮೊನ್ನೆ ಬುಧವಾರ ಬ್ಯಾಂಕ್ ಕಾರ್ಡುಗಳಿಗೆ ಸಂಬಂಧಪಟ್ಟಂತೆ ಎರಡೂ ಮಹತ್ತರ ನಿರ್ಣಯಗಳಿಗೆ ಚಾಲನೆ ನೀಡಿದ್ದಾರೆ.

ಶೂನ್ಯ ಬಡ್ಡಿದರದ ಸಾಲ:

ಇದು ಕ್ರೆಡಿಟ್ ಕಾರ್ಡುಗಳ ಮೇಲೆ ಕೆಲ ಬ್ಯಾಂಕುಗಳು ಆಯ್ದ ಕೆಲವು ಮಳಿಗೆಗಳೊಡನೆ ಒಡಂಬಡಿಕೆ ಮಾಡಿಕೊಂಡು ಗ್ರಾಹಕರಿಗೆ ಶೂನ್ಯ ಬಡ್ಡಿ ದರದಲ್ಲಿ ಕ್ರೆಡಿಟ್ ನೀಡುವ ಪದ್ಧತಿ. ಫ್ರಿಜ್/ವಾಶಿಂಗ್ ಮೆಶೀನ್/ಟಿವಿ ಇತ್ಯಾದಿ ಗೃಹೋಪಯೋಗಿ ಸರಕುಗಳ ಮೇಲೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ಆ ಸಾಲದ ಮೇಲೆ ಯಾವುದೇ ಬಡ್ಡಿ ದರವಿಲ್ಲದೆ ಮೂಲ ಮೊತ್ತವನ್ನು ಮಾತ್ರ ಮಾಸಿಕ ಕಂತುಗಳ ಮೂಲಕ ಪಾವತಿಸುವ ಸೌಕರ್ಯ ಚಾಲನೆಯಲ್ಲಿತ್ತು. ಇದು ಮೂಲತಃ ಒಂದು ಮಿಥ್ಯೆಯಾದ ಕಾರಣ ಮತ್ತು ಕ್ರೆಡಿಟ್ ಕಾರ್ಡುಗಳ ಬ್ಯಾಂಕುಗಳು ಸರಕು ಮಳಿಗೆಗಳೊಂದಿಗೆ ಸೇರಿಕೊಂಡು ಗ್ರಾಹಕರಿಗೆ ತಪ್ಪು ಭಾವನೆಯನ್ನು ಕೊಡುವ ಕಾರಣ ಇಂತಹ ವ್ಯವಹಾರವನ್ನು ಇನ್ನು ಮುಂದಕ್ಕೆ ನಡೆಯದಂತೆ ಆರ್.ಬಿ.ಐ ನಿರ್ಬಂಧಿಸಿದೆ. ಒಂದು ಬ್ಯಾಂಕು ಈ ರೀತಿಯ ಗ್ರಾಹಕರನ್ನು ಮರುಳು ಮಾಡುವ ಅಪಾರದರ್ಶಕ ಯೋಜನೆಗಳಿಗೆ ಭಾಗಿಯಾಗುವುದನ್ನು ಈ ಮೂಲಕ ಆರ್.ಬಿ.ಐ ನಿಲ್ಲಿಸಿದೆ.

ಇದೊಂದು ಸ್ವಾಗತಾರ್ಹ ಬದಲಾವಣೆ. ಇನ್ನು ಮುಂದೆ ಸರಕಿನ ಮಳಿಗೆಗಳು ಡಿಸ್ಕೌಂಟ್ ಅನ್ನು ನೇರವಾಗಿ ಗ್ರಾಹಕನಿಗೆ ಘೋಷಿಸಿ ಕ್ರೆಡಿಟ್ ಕಾರ್ಡ್ ಕಂಪೆನಿಗಳು ಬಡ್ಡಿಯನ್ನೂ ಪ್ರತ್ಯೇಕವಾಗಿ ತಿಳಿಸಿ ಗ್ರಾಹಕನಿಂದ ಪಡೆಯತಕ್ಕದ್ದು. ಅಂದರೆ ಅಷ್ಟು ಬಡ್ಡಿ ನೀಡಿ ಕ್ರೆಡಿಟ್ ಕಾರ್ಡಿನ ಕಂತುಗಳ ಮೂಲಕ ಖರೀದಿಸಬೇಕೇ ಅಥವಾ ನಗದು ಕೊಟ್ಟು ಒಮ್ಮೆಲೇ ಪೂರ್ತಿ ಪಾವತಿ ಮಾಡಿ ಖರೀದಿಸಬೇಕೇ ಎನ್ನುವ ಆಯ್ಕೆ ಗ್ರಾಹಕನಿಗೆ ಪೂರ್ತಿ ಮಾಹಿತಿಗಳೊಂದಿಗೆ ಇರುತ್ತದೆ. ಅಪೂರ್ಣ ಮಾಹಿತಿಗಳಿಂದ ತಪ್ಪು ನಿರ್ಣಯ ತೆಗೆದುಕೊಳ್ಳುವ ಅಪಾಯ ಇಲ್ಲ. ಅದಲ್ಲದೆ ಇಡೀ ವ್ಯವಹಾರದಲ್ಲಿ ಪಾರದರ್ಶಕತೆ ಇರುತ್ತದೆ. ಬ್ಯಾಂಕುಗಳಿಗೆ ಒಂದು ಸದುದ್ಧೇಶಪೂರಿತ ವಿತ್ತೀಯ ಶಿಸ್ತು ಇರುತ್ತದೆ.

ಯಾಕೆ ವಿರೋಧ?

ಸುಲಭ ಕಂತುಗಳಲ್ಲಿ ಮಾರುವ ಯಾವುದೇ ಸ್ಕೀಮಿಗೂ ಬೇಡಿಕೆ ಜಾಸ್ತಿ. ಒಂದೇ ಬಾರಿಗೆ ದುಡ್ಡು ಕೊಡುವ ಬದಲು ಕಂತು ಕಂತಾಗಿ ನೀಡಬಹುದಾದರೆ ಖಂಡಿತವಾಗಿ ಖರೀದಿಸುವ ಇಚ್ಛೆ ಜಾಸ್ತಿಯೇ. ಆದರೆ ಅಧಿಕ ಬಡ್ಡಿ ದರವನ್ನು ಕೊಡಲೂ ಜನ ಒಪ್ಪುವುದಿಲ್ಲ. ಸುಲಭ ಕಂತುಗಳಲ್ಲಿ ಕೊಡಿ ಆದರೆ ೩೩% ಬಡ್ಡಿ ಆಗತ್ತೆ ಅಂತ ನೇರವಾಗಿ ಹೇಳಿದರೆ ಮಳಿಗೆಯ ಹತ್ತಿರ ಯಾರೂ ಸುಳಿಯಲಿಕ್ಕಿಲ್ಲ.

ಅದಕ್ಕಾಗಿಯೇ ಈ ಶೂನ್ಯ ಬಡ್ಡಿ ದರ ಈಯೆಮ್ಮೈಯನ್ನು ಬಹಳ ಜಾಣ್ಮೆಯಿಂದ ಹೆಣೆಯಲಾಗಿದೆ. ಇದರಲ್ಲಿ ಬಡ್ಡಿ ದರ ಹೊರ ನೋಟಕ್ಕೆ ಗೋಚರಿಸುವುದೇ ಇಲ್ಲ. ಬ್ಯಾಂಕು ಮತ್ತು ಮಳಿಗೆಗಳ ಒಳ ಒಪ್ಪಂದವನ್ನು ಪರಿಶೀಲಿಸಬೇಕಾಗುತ್ತದೆ. ಅದು ಬಿಟ್ಟು ಗ್ರಾಹಕರು ಶೂನ್ಯ ಬಡ್ಡಿಯ ಪ್ರಚಾರಕ್ಕೆ ಬಲಿಯಾಗುತ್ತಾರೆ. ಇದರೊಂದಿಗೆ ಬ್ಯಾಂಕುಗಳೂ ಕೈಜೋಡಿಸಿರುವುದು ಒಂದು ದುರಂತವೇ ಸರಿ.

ಈ ಹೊಸ ನಿರ್ಬಂಧನೆಯಿಂದ ಸ್ವಾಭಾವಿಕವಾಗಿ ಮಳಿಗೆಗಳ ಮಾಲೀಕರಿಗೆ ತಲೆಬಿಸಿಯಾಗಿದೆ. ಇದ್ದದ್ದನ್ನು ಇದ್ದಂತೆ ತಿಳಿಸಿ ಬಡ್ಡಿದರ ೩೩% ಅಂತ ಹೇಳಿದರೆ ಅವರ ಸೇಲ್ಸ್ ಮೊದಲಿನಂತೆ ಇರಲು ಸಾಧ್ಯವಿಲ್ಲ. ಅದಕ್ಕಾಗಿ ಅವರುಗಳು ಈ ಹೆಜ್ಜೆಯನ್ನು ವಿರೋಧಿಸುತ್ತಾರೆ. ಆದರೆ ಈ ಹೆಜ್ಜೆ ಈಗ ಗ್ರಾಹಕನ ಕಣ್ಣು ತೆರೆಸಿದೆ.

ಡೆಬಿಟ್ ಕಾರ್ಡ್ ಬಳಕೆಗೆ ಶುಲ್ಕ:

ಈ ಬಾರಿ ರಿಸರ್ವ್ ಬ್ಯಾಂಕು ಎರಡು ಮಹತ್ತರ ನಿರ್ಬಂಧಗಳನ್ನು ಹಾಕಿವೆ. ಅದರಲ್ಲಿ ಒಂದು ಶೂನ್ಯ ಬಡ್ದಿದರದ ಸಾಲಗಳ ಮೇಲೆಯಾದರೆ ಇನ್ನೊಂದು ಡೆಬಿಟ್ ಕಾರ್ಡ್ ಉಪಯೋಗದ ಮೇಲೆ ಕೆಲವು ಅಂಗಡಿಗಳು ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕದ ಮೇಲೆ.

ಕೆಲವು ಸರಕು ಮಳಿಗೆಗಳು ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿದಲ್ಲಿ ಗ್ರಾಹಕರಿಂದ ಹೆಚ್ಚುವರಿ ೨% ಶುಲ್ಕ ವಸೂಲು ಮಾಡುತ್ತಿವೆ. ವಾಸ್ತವದಲ್ಲಿ ಡೆಬಿಟ್ ಕಾರ್ಡ್ ಬಳಕೆಗೆ ಇರುವ ಶುಲ್ಕವನ್ನು ಬ್ಯಾಂಕು ನೇರವಾಗಿ ಮಳಿಗೆಗಳಿಂದ ವಸೂಲಿ ಮಾಡುತ್ತಿವೆ. ಈ ಶುಲ್ಕವನ್ನು ಹೆಚ್ಚಿನ ಮಳಿಗೆಗಳು ತಮ್ಮದೇ ಜೇಬಿನಿಂದ ಕೊಡುತ್ತಿವೆ ಮತ್ತು ನ್ಯಾಯವಾಗಿ ಅವರುಗಳೇ ನೀಡಬೇಕಾದದ್ದೂ ಹೌದು. ಈ ಶುಲ್ಕಕ್ಕೆ ಪ್ರತಿಫಲವಾಗಿ ಡೆಬಿಟ್ ಕಾರ್ಡ್ ಬಳಕೆಯಿಂದಾಗಿ ಮಳಿಗೆಗಳಿಗೆ ಮಾರಾಟ ಹೆಚ್ಚುತ್ತದೆ ಎನ್ನುವುದು ಇದರ ಹಿನ್ನೆಲೆಯಲ್ಲಿ ಇರುವ ತತ್ವ. ಆದರೆ ಕೆಲ ಮಳಿಗೆಗಳು ಈ ಶುಲ್ಕವನ್ನು ಗ್ರಾಹಕರ ತಲೆಯ ಮೇಲೆ ವರ್ಗಾಯಿಸುತ್ತಿವೆ. ಈ ಚಟುವಟಿಕೆ ತಪ್ಪು ಮತ್ತು ಮಳಿಗೆಗಳು ಹಾಗೆ ಮಾಡಬಾರದು ಎಂಬ ಕಟ್ಟುನಿಟ್ಟಾದ ನಿಷೇಧವನ್ನು ಆರ್.ಬಿ.ಐ ಕಳೆದ ಬುಧವಾರ ಹೊರಡಿಸಿದೆ. ಇದರಿಂದ ಕೆಲ ಮಳಿಗೆಗಳು ಅಸಮಧಾನಗೊಳ್ಳಬಹುದಾದರೂ ಹಲವಾರು ಗ್ರಾಹಕರು ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗಿದೆ.

Image

Image

ನಿಮ್ಮ ಟಿಪ್ಪಣಿ ಬರೆಯಿರಿ