ಹೊಸ ಕಂಪೆನಿ ಲಾ … (ವಿಜಯವಾಣಿ, 21.10.2013)

Image

Company law vijayavani2ಕಂಪೆನೀಸ್ ಆಕ್ಟ್ – ೨೦೧೩

ಯಾವುದೇ ಬಿಸಿನೆಸ್ ಸಸೂತ್ರವಾಗಿ ನಡೆಯಬೇಕಾದರೆ ಅದು ಒಂದು ಕಾನೂನಿನ ಚೌಕಟ್ಟಿಗೆ ಬದ್ಧವಾಗಿರಬೇಕಾಗುತ್ತದೆ. ಸಾರ್ವಜನರ ಹಿತದೃಷ್ಟಿಯಲ್ಲಿ ಮಾಡಲ್ಪಟ್ಟ ಕಾನೂನು ಆ ಬಿಸಿನೆಸ್ ಸುಗಮವಾಗಿ, ಎಲ್ಲರ ಅಭಿವೃದ್ಧಿಗೆ ಪೂರಕವಾಗಿ ನಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಯಾರ ಪಾಡೂ ನಮಗೆ ಬೇಡ ನಮ್ಮಷ್ಟಕ್ಕೆ ನಾವಿರುತ್ತೇವೆ ಅಂತ ಹೊರಟರೂ ಕೆಲವು ಸಿವಿಲ್ ಕೋಡುಗಳು ಇನ್ನಿತರ ಕಾನೂನುಗಳು ಈ ಸಮಾಜಕ್ಕೆ ನಮ್ಮನ್ನು ಬದ್ಧವಾಗಿಡುತ್ತದೆ. ಸ್ವೇಚಾಚಾರ ಅನಾಚಾರವಾಗದಂತೆ ಕಾನೂನು ಸಮಾಜವನ್ನು ಕಾಯುತ್ತದೆ.

ಕಂಪೆನೀಸ್ ಆಕ್ಟ್ ೧೯೫೬ ಈ ನಿಟ್ಟಿನಲ್ಲಿ ಕಂಪೆನಿಗಳನ್ನು ಹುಟ್ಟುಹಾಕುವ ಮತ್ತು ನಡೆಸಲು ಸೂಕ್ತ ಚೌಕಟ್ಟು ಹಾಕಿಕೊಡುವ ಒಂದು ಕಾನೂನು. ಆದರೆ ಬದಲಾಗುವ ಕಾಲಕ್ಕೆ ಹಾಗೂ ಸಂದರ್ಭಕ್ಕೆ ತಕ್ಕಂತೆ ಕಾನೂನುಗಳೂ ಬದಲಾಗಬೇಕಾದ್ದು ಅಗತ್ಯ ತಾನೇ? ಆದರೆ ನಮ್ಮ ದೇಶದಲ್ಲಿ ಅದು ನಿಯಕಾಲಿಕವಾಗಿ ಸಮಯಕ್ಕೆ ಸರಿಯಾಗಿ ಆಗುವುದು ಕಾಣಿಸುವುದಿಲ್ಲ.

ನಮ್ಮ ದೇಶದಲ್ಲಿ ಒಂದು ಕಾನೂನು ಬರಬೇಕಾದರೆ ಅದಕ್ಕೆ ಪೂರ್ವಭಾವಿಯಾಗಿ ಸಾವಿರಾರು ಜನರ ಮನೆ ಮುಳುಗಿರಬೇಕು, ದೇಶದ ಉದ್ದಗಲಕ್ಕೂ ಪ್ರತಿಭಟನೆ ನಡೆಯಬೇಕು ಅಥವಾ ರಾಜಕಾರಣಿಗಳ ಹಿತಾಸಕ್ತಿಗೆ ಪೂರಕವಾದ ಒಂದು ಅವಕಾಶ ಅದರಲ್ಲಿ ಹುದುಗಿರಬೇಕು. ಇದು ಮೂರರಲ್ಲಿ ಒಂದಂಶವಾದರೂ ಇಲ್ಲದಿದ್ದರೆ ಒಂದು ಹೊಸ ಶಾಸನ ನಮ್ಮಲ್ಲಿ ಬರುವುದಿಲ್ಲ. ಅದು ಬಿಡಿ, ಹಾಗಿರುವ ಒಂದು ಹೊಸ ಕಾನೂನು ಬಂತು ಎಂದೇ ತಿಳಿದುಕೊಳ್ಳಿ. ಅಲ್ಲೂ ನಮ್ಮ ಪ್ರಾರಬ್ಧಕರ್ಮ ನಮ್ಮನ್ನು ಬಿಡುವುದಿಲ್ಲ. ಕಾನೂನು ಪ್ರಕಟವಾಗಿ ಅದರ ಇಂಕು ಆರುವ ಮೊದಲೇ ಸರಕಾರಿ ಬಾಬುಗಳು, ಲೋಕಲ್ ಪುಡಾರಿಗಳು, ಪೋಲೀಸರು, ಇನ್ಸ್ಪೆಕ್ಟರುಗಳು, ಇತ್ಯಾದಿ ಸಕಲರೂ ಅದರಿಂದ ಗರಿಷ್ಠ ಆರ್ಥಿಕ ಲಾಭ ಯಾವ ತರ ಹಿಂಡಬಹುದು ಎನ್ನುವ ಲೆಕ್ಕಾಚಾರಕ್ಕೆ ತೊಡಗುತ್ತಾರೆ.

ಶಾಸಕಾಂಗದ ಗರ್ಭದಿಂದ ಹೊರ ಬರುವ ಕಾನೂನುಗಳೆಲ್ಲವೂ ಉದಾತ್ತ ಧ್ಯೇಯಗಳನ್ನು ಇಟ್ಟುಕೊಂಡೇ ಜನ್ಮತಾಳುತ್ತವೆ. ಆದರೆ ಕೇವಲ ಉದ್ಧೇಶಿತ ದ್ಯೇಯಗಳನ್ನು ನೋಡಿ ಕಾನೂನಿಗೆ ಜೈ ಹಾಕುವ ತಪ್ಪನ್ನು ನಾವು ಯಾವತ್ತೂ ಮಾಡಬಾರದು. ಈ ಕಾನೂನು ಎಷ್ಟರ ಮಟ್ಟಿಗೆ ತನ್ನ ಉದ್ಧೇಶಗಳನ್ನು ಸಕಾರಗೊಳಿಸಬಲ್ಲುದು? ಅನುಷ್ಠಾನಗೊಂಡಾಗ ತನ್ನ ಯಾವ ನಿಜಬಣ್ಣವನ್ನು ಕಾರಬಹುದು? ಎಷ್ಟರ ಮಟ್ಟಿಗೆ ಜನಸಾಮಾನ್ಯನಿಗೆ ನೈಜ ಪ್ರಯೋಜನವನ್ನು ನೀಡಬಹುದು? ಸುರಸುಂದರಿಯಂತೆ ಧರೆಗಿಳಿದ ಕಾನೂನು ಆ ಬಳಿಕ ಪಟ್ಟಭದ್ರ ಧನಾಸಕ್ತರ ಕೈಯಲ್ಲಿ ನಲುಗಿ ಹಲವು ಬದಲಾವಣೆಗಳನ್ನು ಹೊಂದಿ ಯಾವ ರೀತಿಯಲ್ಲಿ ಕೊನೆಗೊಮ್ಮೆ ತನ್ನ ಕರಾಳ ರೂಪ ಬಿಚ್ಚಿಡಬಹುದು? ಈ ದೃಷ್ಟಿಯಿಂದ ನೋಡಿ ವಿಶ್ಲೇಷಿಸಿದ ಬಳಿಕವೇ ನಾವುಗಳು ನಮ್ಮ ಅಭಿಪ್ರಾಯದ ಜೈಕಾರ ಹಾಕಬಹುದು. ಮೇಲ್ನೋಟಕ್ಕೆ ಕಾಣಸುವ ಆದರ್ಶಗಳು ನೇರವಾಗಿ ಯೋಚಿಸುವ ಸಾತ್ವಿಕರ ಬಾಯಿ ಮುಚ್ಚಿಸುವುದಕ್ಕಾಗಿ ಮಾತ್ರ ಕೆಲಸ ಮಾಡುತ್ತವೆ. ಇದು ನಮಗೆ ನಮ್ಮ ರಾಜಕಾರಣಿಗಳೇ ಕಲಿಸಿದ ಪಾಠ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಇದೀಗ ಕಾನೂನಾಗಿ ಬಂದಿರುವ ಕಂಪೆನೀಸ್ ಬಿಲ್ ನಮ್ಮ ಸರಕಾರವೆಂಬ ಕಾನೂನು ಕಾರ್ಖಾನೆಯಲ್ಲಿ ಅಚ್ಚಾದ ಇನ್ನೊಂದು ಅಂತಹ ಕಾನೂನು. ಈ ಕಾನೂನಿನ ಮುಖ್ಯ ಭೂಮಿಕೆಯಲ್ಲಿ ಕೆಲವು ಒಳ್ಳೆಯ ಅಂಶಗಳು ಇವೆ.

ಹೂಡಿಕೆದಾರರಿಗೆ ಹಿತರಕ್ಷಣೆ:

ಹೂಡಿಕೆದಾರರೈಗೆ ಹೆಚ್ಚುವರಿ ಹಿತ ರಕ್ಷಣೆ ಒದಗಿಸುವುದು ಈ ಕಾನೂನಿನ ಒಂದು ಮುಖ್ಯ ಗುರಿ. Serious fraud Investigation Office (SFIO) ಎನ್ನುವ ಮೋಸವನ್ನು ತನಿಖೆ ಮಾಡುವ ಸಂಸ್ಥೆಗೆ ಈಗಿರುವುದಕ್ಕಿಂತ ಜಾಸ್ತಿ ಶಾಸನದ ಅಧಿಕಾರವನ್ನು – ದಸ್ತಗಿರಿ ಮಾಡುವಂತಹ- ನೀಡಲಾಗಿದೆ. ಇವಿಷ್ಟು ಒಂದು ಕಂಪೆನಿಯಲ್ಲಿ ಮೋಸಗಳು ನಡೆಯದಂತೆ ತಡೆಕಟ್ಟುವ ನಿಟ್ಟಿನಲ್ಲಿ ರೂಪಿತಗೊಂಡ ಉತ್ತಮ ಕಾನೂನುಗಳು.

‘ಕ್ಲಾಸ್-ಆಕ್ಷನ್ ಸೂಟ್’ ಎಂಬುದು ಅಮೆರಿಕಾದಲ್ಲಿ ಪ್ರಭಲವಾದ ಒಂದು ಕಾನೂನು. ಈಗ ಅದು ಭಾರತಕ್ಕೂ ಈ ಮುಖಾಂತರ ಬಂದಿದೆ. ಒಂದು ಕಂಪೆನಿ ದುರ್ವ್ಯವಹಾರದಲ್ಲಿ ತೊಡಗಿದಾಗ ಕೆಲ ಹೂಡಿಕೆದಾರರ ಗುಂಪು ಎಲ್ಲರ ಪರವಾಗಿ ತಪ್ಪು ಎಸಗಿದ ಕಂಪೆನಿಯ, ಅದರ ನಿರ್ದೇಶಕರ, ಆಡಿಟರುಗಳ ವಿರುದ್ಧ ನೇರವಾಗಿ ಕೇಸ್ ಫೈಲ್ ಮಾಡಿ ನಷ್ಟ ಪರಿಹಾರಕ್ಕೆ ಆಗ್ರಹಿಸಬಹುದು. ಇದು ಪಾಶ್ಚಾತ್ಯ ದೇಶಗಳಲ್ಲಿ ಈವಾಗಲೇ ಇವೆ ಆದರೂ ಭಾರತದಲ್ಲಿ ಇದಕ್ಕೆ ಕಾನೂನಿನ ಅವಕಾಶ ಇರಲಿಲ್ಲ. ಸತ್ಯಂ ಹಗರಣ ನಡೆದಾಗ ಭಾರತದಲ್ಲಿ ನಾವೆಲ್ಲಾ ಕೈ ಕೈ ಹಿಸುಕುತ್ತಿರುವಾಗ ಅದೇ ಕಂಪೆನಿಯ ಮೇಲೆ ಅಮೇರಿಕಾದ ಹೂಡಿಕೆದಾರರು ಕ್ಲಾಸ್ ಆಕ್ಷನ್ ಸೂಟ್ ಹಾಕಿ ನಷ್ಟ ಪರಿಹಾರ ಗಿಟ್ಟಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದು ಸತ್ಯಂನಿಂದಲೇ ಪ್ರೇರಿತವಾದ ಒಂದು ಉತ್ತಮವಾದ ಹೆಜ್ಜೆ ಎನ್ನಲಾಗುತ್ತದೆ.

ನೌಕರರ ಹಿತರಕ್ಷಣೆ:

ಇವಲ್ಲದೆ ಸಿಬ್ಬಂದಿ/ನೌಕರ ವರ್ಗದವರ ಹಿತದೃಷ್ಟಿಯಿಂದ, ಒಂದು ಕಂಪೆನಿ ಮುಚ್ಚಿಹೋದ ಸಂದರ್ಭದಲ್ಲಿ ಅವರುಗಳಿಗೆ ೨ ವರ್ಷದ ಸಂಬಳ ನೀಡಬೇಕು ಎನ್ನುವ ತಾಕೀತು ಮಾಡಲಾಗಿದೆ. ಇದು ನೌಕರರ ಪಾಲಿಗೆ ಒಂದು ಉತ್ತಮ ವರದಾನವಾಗಲಿದೆ. ಆದರೆ ಮುಚ್ಚುವ ಹಂತಕ್ಕೆ ಬಂದ ಒಂದು ಸಿಕ್-ಬಿಸಿನೆಸ್ ಬೇರೆಲ್ಲಾ ಸಾಲ ಸೋಲಗಳ ನಡುವೆ ನೌಕರರಿಗೆ ೨ ವರ್ಷಗಳ ಸಂಬಳವನ್ನೂ ಕೊಡುವುದರ ವಾಸ್ತವಿಕತೆಯ ಬಗ್ಗೆ ಯೋಚಿಸಬೇಕಿತ್ತು. ಇದರ ಅನುಷ್ಠಾನ ಹೇಗೆ ಸಾಧ್ಯ? ಕೆಲವೊಂದು ಶಾಸನಗಳನ್ನು ನೋಡುವಾಗ ಬಿಸಿನೆಸ್ ಕ್ಶೇತ್ರದಲ್ಲಿ ಸರಕಾರದ ಬಾಬೂಗಳ ಅನುಭವದ ಕೊರತೆ ಎದ್ದು ತೋರುತ್ತದೆ.

ಆಡಳಿತಾತ್ಮಕ ಸುಧಾರಣೆ:

ಓರ್ವ ಕಂಪೆನಿಯ ನಿರ್ದೇಶಕನ ಕಾರ್ಯ ಮತ್ತು ಜವಬ್ದಾರಿಗಳ ಬಗ್ಗೆ ಸ್ಪಷ್ಟವಾದ ನಿಯಮಾವಳಿಗಳನ್ನು ಈ ಕಾನೂನಿನಲ್ಲಿ ಹೊರತಂದಿದ್ದಾರೆ. ಆತ ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಶಿದ್ಧ ಹಸ್ತನಾಗಿ ಕಂಪೆನಿಯ ಹಿತದೃಷ್ಟಿಯಿಂದ ಮಾತ್ರ ಕೆಲಸ ಮಾಡ ಬೇಕು ಎನ್ನುವ ತತ್ವವನ್ನು ಈ ನಿಯಮಾವಳಿಗಳು ಪ್ರತಿಬಿಂಬಿಸುತ್ತವೆ.

ಅದಲ್ಲದೆ, ಕಂಪೆನಿಯೊಳಗಣ ವ್ಯವಹಾರಗಳ ಸುಪರ್ದಿಗಾಗಿ ಒಂದು ಲಿಸ್ಟೆಡ್ ಕಂಪೆನಿಯಲ್ಲಿ ಮೂರನೆಯ ಒಂದಂಶ ಡೈರೆಕ್ಟರ್‌ಗಳು ಹೊರಗಿನವರಾಗಿರಬೇಕೆಂಬ ನಿಯಮ ಬಂದಿದೆ. ಹಾಗೂ ಒಬ್ಬ ಅಂತಹ ಬಾಹ್ಯ ನಿರ್ದೇಶಕ ೩ ವರ್ಷಗಳ ೨ ಅವಧಿಗಿಂತ ಜಾಸ್ತಿ ಆ ಸ್ಥಾನದಲ್ಲಿರುವಂತಿಲ್ಲ. ನಿರ್ದೇಶಕರ ಸಂಬಳ/ಸಂಭಾವನೆಗಳ ಮೇಲೂ ಕಡಿವಾಣ ಬಂದಿದೆ. ಹಾಗೂ, ಸಣ್ಣ ಹೂಡಿಕೆದಾರರ ಪರವಾಗಿ ಒಬ್ಬ ನಿರ್ದೇಶಕ ಕಾರ್ಯವಹಿಸಬಹುದಾಗಿದೆ.

ಈ ಬಿಲ್ಲಿನಲ್ಲಿ ಕಂಪೆನಿಯ ಆಡಿಟರ್‌ಗಳ ಮೇಲೆ ಜಾಸ್ತಿ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಆಡಿಟರ್‌ಗಳು ಸ್ಕಾಮ್-ಗೀಮ್‌ಗಳ ಬಗ್ಗೆ ಅಥವ ಯಾವುದೇ ದುರ್ವ್ಯವಹಾರಗಳ ಬಗ್ಗೆ ರಿಪೋರ್ಟ್ ಮಾಡದೇ ಹೋದಲ್ಲಿ ಅಥವಾ ತಪ್ಪು/ಸುಳ್ಳು ಮಾಹಿತಿ ಕೊಟ್ಟಲ್ಲಿ ಅವರಿಗೆ ಶಿಕ್ಷೆಯಾಗಬಹುದು. ಪ್ರತಿ ೫ ವರ್ಷಗಳಿಗೊಮ್ಮೆ ಆಡಿಟರ್ ಬದಲಾಗಬೇಕು, ಹಾಗೆಯೇ ಓರ್ವ ಆಡಿಟರ್ ಏಕಕಾಲದಲ್ಲಿ ೨೦ ಕ್ಕಿಂತ ಜಾಸ್ತಿ ಕಂಪೆನಿಗಳ ಆಡಿಟ್ ಮಾಡಬಾರದು.

ಸರ್ವ ಸದಸ್ಯರ ಸಭೆಗೆ ಕಟ್ಟುನಿಟ್ಟಾದ ಖೋರಮ್ ಅಗತ್ಯ, ನಿರ್ದೇಶಕರ ಶೇರುಕಟ್ಟೆಯಲ್ಲಿ ಒಳಕೈ ವ್ಯವಹಾರದ ಮೇಲೆ ಸಂಪೂರ್ಣ ನಿರ್ಬಂಧ, ಎಲ್ಲಾ ಕಂಪೆನಿಗಳೂ ಸಮಾನವಾಗಿ ಎಪ್ರಿಲ್-ಮಾರ್ಚ್ ವರ್ಷವನ್ನು ಅನುಸರಿಸುವುದು, ಒಂದಕ್ಕೊಂದು ಸಂಬಂಧಪಟ್ಟ ಕಂಪೆನಿಗಳ ನಡುವಿನ ವ್ಯವಹಾರಕ್ಕೆ ಸರಿಯಾದ ಕ್ರಮಗಳು, ಇಲೆಕ್ಟ್ರಾನಿಕ್ ವೋಟಿಂಗ್ ಮತ್ತು ವೀಡಿಯೋ ಮೂಲಕ ಮೀಟಿಂಗುಗಳ ಆರಂಭ, ಒಬ್ಬನಾದರೂ ನಿರ್ದೇಶಕ ಭಾರತದಲ್ಲಿ ನಿವಾಸಿಯಾಗಿರ ಬೇಕು. ಕಂಪೆನಿಗಳ ವಾರ್ಷಿಕ ಲೆಕ್ಕಪತ್ರಗಳನ್ನು ಮುಖ್ಯ ಲೆಕ್ಕಾಧಿಕಾರಿ (ಸಿಎಪ್‌ಓ) ಸಹಿ ಮಾಡಬೇಕು – ಇತ್ಯಾದಿ ಇನ್ನೂ ಎಷ್ಟೋ ಹೊಸ ನಿಯಮಾವಳಿಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಇವುಗಳ ಮುಖ್ಯ ಉದ್ಧೇಶ ಕಂಪೆನಿಯ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಹೆಚ್ಚಾಗಿಸಿ ಹೂಡಿಕೆದಾರರಿಗೆ ನ್ಯಾಯ ಒದಗಿಸುವುದೇ ಆಗಿದೆ.

ಮಹಿಳಾ ಕಲ್ಯಾಣ:

ಇದೇ ರೀತಿಯ ಇನ್ನೊಂದು ಅಂಶ ಮಹಿಳಾ ನಿರ್ದೇಶಕರ ಬಗ್ಗೆ. ಒಂದು ಕಂಪೆನಿಯಲ್ಲಿ ಓರ್ವ ಮಹಿಳೆ ಮೀಸಲಾತಿ ಪದ್ಧತಿಯಲ್ಲಿ ನಿರ್ದೇಶಕಳಾಗಿ ಏಕೆ ಬರಬೇಕು ಎನ್ನುವುದಕ್ಕೆ ಉತ್ತರವಿಲ್ಲ. ಇದರಿಂದ ಆ ಒಬ್ಬ ಮಹಿಳೆಗೆ ವೈಯಕ್ತಿಕವಾಗಿ ಲಾಭ ಉಂಟಾಗುವುದರ ಹೊರತಾಗಿ ಸಮಾಜಕ್ಕಾಗಲಿ ಆರ್ಥಿಕತೆಗಾಗಲಿ ಅಥವಾ ಸಂಸ್ಥೆಗಾಗಲಿ ಯಾವ ರೀತಿ ಪ್ರಯೋಜನವಾದೀತು ಎನ್ನುವುದಕ್ಕೆ ಯಾವುದೇ ತಾರ್ಕಿಕ ವಿವರಣೆಯನ್ನು ಕಾನೂನು ಮಾಡಿದವರು ಕೊಟ್ಟಿಲ್ಲ; ಆ ಬಗ್ಗೆ ಚರ್ಚೆಯೂ ನಡೆದಿಲ್ಲ. ಒಂದು ಕಾರ್ಪೊರೇಟ್ ನಡೆಸುವದರ ಮತ್ತು ಒಂದು ಮುನಿಸಿಪಲ್ ಕಾರ್ಪೋರೇಶನ್ ನಡೆಸುವುದರ ಮದ್ಯೆ ಇರುವ ವ್ಯತ್ಯಾಸ ನಮ್ಮ ರಾಜಕಾರಣಿಗಳಿಗೆ ಇನ್ನೂ ಗೊತ್ತಿಲ್ಲ. ಮಹಿಳಾ ಕಲ್ಯಾಣ ಎಂಬ ಹೆಸರಿನಲ್ಲಿ ನಮ್ಮ ಮಹಿಳೆಯರ ವೋಟ್ ಸೆಳೆಯಲು ಇಂತಹ ಗಿಮಿಕ್‌ಗಳು ಸಹಾಯವಾದೀತು ಅಷ್ಟೆ.

ಕೇವಲ ಮೆರಿಟ್ ಆಧಾರದ ಮೇಲೆ ಮಾತ್ರ ನಡೆಯುವ ಬಿಸಿನೆಸ್ ವಲಯದಲ್ಲಿ ಈಗ ಯಾವುದೇ ರೀತಿಯ ರಿಸರ್ವೇಶನ್ ಪದ್ಧತಿಯೂ ಇರುವುದಿಲ್ಲ. ಈ ಕಾನೂನು ಮೂಲಕ ಒಂದು ರೀತಿಯ ಲಿಂಗಾದಾರಿತ ರಿಸರ್ವೇಶನ್ ಪದ್ಧತಿ ಈಗ ಖಾಸಗಿ ವಲಯಕ್ಕೆ ಅಡಿಯಿಟ್ಟಿದೆ. ಯಾವುದೇ ಸಾಮಾಜಿಕ ಲಾಭವಿಲ್ಲದ ಈ ಹೆಜ್ಜೆಯಿಂದ ಪ್ರತಿಭಾವಂತ ಪುರುಷವರ್ಗದವರ ಕಾರ್ಯ ಕ್ಷಮತೆಗೆ ಮತ್ತು ಉತ್ಸಾಹಕ್ಕೆ ಪೆಟ್ಟು ಬೀಳಲಿದೆ. ಇದರ ಪರಿಣಾಮ ಇಡೀ ಕಂಪೆನಿಯ ಮೇಲೆ ಬೀರಲಿದೆ.

ಸಾಮಾಜಿಕ ಬದ್ಧತೆ:

ಇದೇ ರೀತಿಯ ಇನ್ನೊಂದು ತಂತ್ರ ‘ಸಿಎಸ್‌ಆರ್’! ಅಂದರೆ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ. ಇದರ ಪ್ರಕಾರ ಒದು ಕಂಪೆನಿ ತನ್ನ ಲಾಭಾಂಶದ ೨% ವನ್ನು ಸಮಾಜ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು. ಮೇಲ್ನೋಟಕ್ಕೆ ಉದಾತ್ತ ದ್ಯೇಯವನ್ನು ಹೊತ್ತುಕೊಂಡು ಬರುವ ಈ ಕಾನೂನು ಅಸಲಿಗೆ ಲೋಕಲ್ ಪುಡಾರಿಗಳಿಗೆ ಭ್ರಷ್ಟಾಚಾರದ ಒಂದು ದೊಡ್ಡ ಕೂಪವಾಗದೆ ಇದ್ದರೆ ನಾವು ಪುಣ್ಯವಂತರು. ಇದೇ ಸಮಾಜ ಕಲ್ಯಾಣಕ್ಕಾಗಿ ಈಗಾಗಲೇ ನೀಡುತ್ತಿರುವ ೩೪% ಆದಾಯ ಕರ ಅಲ್ಲದೆ ಇನ್ನೊಂದು ೨೦-೩೦% ವ್ಯಾಟ್-ಗೀಟುಗಳು, ಕಷ್ಟಂ-ಎಗ್ಸೈಸಾದಿಗಳು ಯಾವ ರೀತಿ ವಿನಿಯೋಗ ಆಗುತ್ತಿವೆ ಎನ್ನುವುದನ್ನು ನಾವುಗಳು ಈಗಾಗಲೇ ನೋಡುತ್ತಿದ್ದೇವೆ. ತಾನು ಮಾಡಬೇಕಾದ ಕೆಲಸವನ್ನು ಇನ್ನೊಬ್ಬರ ತಲೆಯ ಮೇಲೆ ಹೊರಿಸಿ ಅವನನ್ನು ಶೋಷಿಸುವುದು ನಮ್ಮ ಸರಕಾರದ ಹಳೆಯ ಚಾಳಿ. ಅತ್ಯುತ್ತಮ ಕ್ರಮ ಎಂದು ಚಪ್ಪಾಳೆ ತಟ್ಟುವವರು ನಾಳೆ ಈ ‘ಕರ’ ೪% ಬಳಿಕ ೬% ಎಂಬಂತೆ ಹೆಚ್ಚಾಗುತ್ತಾ ಹೋಗುವಾಗ ಅಂತಿಮವಾಗಿ ಅದು ಯಾರ ಕಿಸೆಯನ್ನು ಕೊರೆಯುತ್ತದೆ, ಯಾರ ಕಿಸೆಯನ್ನು ತುಂಬುತ್ತದೆ ಎನ್ನುವುದನ್ನು ಅರಿಯಬೇಕು.

ಸಾರ್ವಜನಿಕರ ಹೂಡಿಕೆಯುಳ್ಳ ಕಂಪೆನಿಗಳಲ್ಲಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಬೇಕು; ತಪ್ಪು ಕೆಲಸ ಮಾಡುವ ಕಂಪೆನಿಗಳನ್ನು ಖಂಡಿತವಾಗಿ ಸದೆಬಡಿಯಬೇಕು. ಆದರೆ ಕಂಪೆನಿಗಳ ಕಾನೂನನ್ನು ಸರಕಾರವು ತನ್ನ ಕೆಲಸವನ್ನು ಮಾಡಿಸಿಕೊಳ್ಳಲಿಕ್ಕೆ ದುಡಿಸುವ ಯಂತ್ರವಾಗಿ ಕಾಣುವ ಬದಲು ಉತ್ತಮ ಬಿಸಿನೆಸ್ಸನ್ನು ಪ್ರೋತ್ಸಾಹಿಸುವತ್ತ ಅದು ಸಮೃದ್ಧವಾದಂತೆ ಬೆಳೆಸುವತ್ತ ಗಮನಹರಿಸಬೇಕು. ಹಾಗೆ ಉಂಟಾಗುವ ಔದ್ಯೋಗಿಕ ಪ್ರಗತಿಯಿಂದ ಸಿಗುವ ಉದ್ಯೋಗಾವಕಾಶ, ಕರಸಂಚಯ, ಡಿವಿಡೆಂಡ್, ಶೇರು ಮೌಲ್ಯ ಇತ್ಯಾದಿಗಳ ಫಲಾಂಶವನ್ನು ಸವಿಯುವತ್ತ ಅದು ಜನತೆಗೆ ಸಿಗುವಂತೆ ಮಾಡುವತ್ತ ಸರಕಾರ ಗಮನಹರಿಸಬೇಕು.

ತಾತ್ವಿಕವಾಗಿ ಬಡ ಜನರ ಉದ್ಧಾರ ಮತ್ತು ಸಮಾಜ ಕಲ್ಯಾಣಕ್ಕೆ ಯಾರದ್ದೂ ವಿರೋಧ ಇರಲು ಸಾಧ್ಯವೇ ಇಲ್ಲ. ಬಿಸಿನೆಸ್‌ಗಳು ತಮ್ಮ ಉದ್ಯೋಗಾವಕಾಶಗಳ ಮತ್ತು ಶೇರು ಮೌಲ್ಯ ವೃದ್ಧಿಯಿಂದ ಈ ಕೆಲಸವನ್ನು ಪರೋಕ್ಷವಾಗಿ ಈಗಾಗಲೇ ಮಾಡುತ್ತಿದೆ. ಸರಕಾರಕ್ಕೆ ಬಡಜನರ ಉದ್ಧಾರ ಮತ್ತು ಸಮಾಜ ಕಲ್ಯಾಣಕ್ಕಾಗಿ ಹಂಚಲು ಬೇಕಾಗುವ ಕೆಲವು ಲಕ್ಷ ಕೋಟಿ ಲೆಕ್ಕದ ದುಡ್ಡು ಬಿಸಿನೆಸ್ ಕರ ರೂಪದಲ್ಲಿ ವಲಯದಿಂದ ಮಾತ್ರ ಬರಬಲ್ಲುದು ಎನ್ನುವುದನ್ನು ಸರಕಾರ ಮರೆಯಬಾರದು. ಹಾಗೂ, ಅದರ ಅಭಿವೃದ್ಧಿಗಾಗಿಯೂ ಶ್ರಮಿಸುವುದು ಸಮಾಜದ ದೃಷ್ಟಿಯಿಂದಲೂ ಅಗತ್ಯ. ಬಿಸಿನೆಸ್ ಬೆಳೆದಂತೆಲ್ಲಾ ಸರಕಾರದ ಆದಾಯವೂ ಬೆಳೆದೀತು; ಜನರ ಕೈಯಲ್ಲೂ ನಾಲ್ಕು ಕಾಸು ಜಾಸ್ತಿ ಬಂದೀತು. ಅದರ ಬದಲು ಕಾರ್ಪೋರೇಟ್ ಕಂಪೆನಿಗಳ ತಲೆಯ ಮೇಲೆ ಅವರ ಮೂಲ ಉದ್ಧೇಶಕ್ಕೆ ಸಂಬಂಧ ಪಡದ ಕೆಲಸಗಳನ್ನು ನೇರವಾಗಿ ಹೊರಿಸಿ ಅವುಗಳನ್ನೂ ಭ್ರಷ್ಟಾಚಾರದತ್ತ ಅದಕ್ಷತೆಯತ್ತ ಎಳೆಯುವ ಕೆಲಸಕ್ಕೆ ಸರಕಾರ ಕೈ ಹಾಕಬಾರದು.

1 thoughts on “ಹೊಸ ಕಂಪೆನಿ ಲಾ … (ವಿಜಯವಾಣಿ, 21.10.2013)

  1. Dear Sir,

    I need more information on Closure Compensation to the employees when the company close down its ooperations. in the aricle you have mentioned employees are eligible to get the 2 years salary as compensation. please if you have documents / or records on the same please share because i am facing the same situation.

ನಿಮ್ಮ ಟಿಪ್ಪಣಿ ಬರೆಯಿರಿ