ಕಾಕು-192 ವಾರದ ವಿಶೇಷ – ಸ್ಪಾಟಿನ ಸ್ಪೋಟ !!

ಮೊನ್ನೆಯ ಗುರುವಾರ. ಕಂಪ್ಯೂಟರ್ ಎದುರು ಕುಳಿತು ಕುಟು ಕುಟು ಮಾಡುತ್ತಿರಬೇಕಾದರೆ ಉಜಿರೆಯ ಗೆಳೆಯ ಗೋಪಿನಾಥ್ ಪ್ರಭು ಅವರಿಂದ ಒಂದು ಖಾಸಗಿ ಸಂದೇಶ ಟುಪ್ ಅಂತ ಬಂದು ಬಿತ್ತು.

“ಎನ್‌ಎಸ್‌ಇಎಲ್ ನಲ್ಲಿ ಟ್ರೇಡಿಂಗ್ ಬಂದ್ ಆಗಿದೆ. ಅದರ ಪ್ರಾಯೋಜಕ ಸಂಸ್ಥೆ ಫೈನಾನ್ಷಿಯಲ್ ಟೆಕ್ನೋಲೊಜಿನ ಶೇರು ಬೆಲೆ ೬೫% ಡೌನ್. ಪೆಯ್ಮೆಂಟ್ ಕ್ರೈಸಿಸ್ ಇದೆಯಂತೆ. ಹಲವು ಬ್ರೋಕಿಂಗ್ ಶೇರುಗಳು ಕುಸಿಯುತ್ತಿವೆ” ಅಂದರು. ‘ಅಯ್ಯೋ ಕರ್ಮ! ಇನ್ನೊಂದು ಹಗರಣಕ್ಕೆ ನಾಂದಿ!’ ಅಂದುಕೊಂಡು ನಿಟ್ಟುಸಿರು ಬಿಟ್ಟೆ.

ಒಂದೆಡೆ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆಯುತ್ತಿರ ಬೇಕಾದರೆ ಇನ್ನೊಂದೆಡೆ ಸ್ಪಾಟ್ ಎಕ್ಸ್ಚೇಂಜಿನ ಗಲಾಟೆ ಈಗ ಬಯಲಿಗಿಳಿದಿದೆ. ಸರಕಾರದ ನಿಯಂತ್ರಣದ ಕೊರತೆ ಹಾಗೂ ನಮ್ಮ ಜನರ ಕಳ್ಳತನದ ದುರಾಸೆ ಯಾವ ರೀತಿ ನಮ್ಮ ಸಮಾಜವನ್ನು ಹಿಂಡುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದೀಗ ಅನಾವರಣಗೊಳ್ಳುತ್ತಿದೆ. ಸುಮಾರು ೧ ತಿಂಗಳಿಂದ ನಿದಾನವಾಗಿ ಟಿಸಿಲೊಡೆಯುತ್ತಿರುವ ಈ ತನಿಖೆ ಈಗ ಧುತ್ತೆಂದು ಎಲ್ಲರೆದುರು ತಲೆಯೆತ್ತಿ ನಿಂತಿದೆ.

ಏನಿದು ಸ್ಪಾಟ್ ಎಕ್ಸ್ಚೇಂಜ್:

ಎಕ್ಸ್ಚೇಂಜ್ ಅಥವಾ ವಿನಿಮಯ ಮಾರುಕಟ್ಟೆಯಲ್ಲಿ ಕೆಲವು ವಿಧ. ಶೇರುಗಳಿಗೆ ಪ್ರತ್ಯೇಕವಾದ ಶೇರು ಮಾರುಕಟ್ಟೆ (ಬಿಎಸ್‌ಇ, ಎನ್‌ಎಸ್‌ಇ) ಸೆಬಿಯ ನಿಯಂತ್ರಣದಡಿಯಲ್ಲಿ, ಕಾಮಾಡಿಟಿ ಅಥವ ಸರಕು ಮಾರುಕಟ್ಟೆಗಳು (ಎಮ್‌ಸಿಎಕ್ಸ್, ಎನ್‌ಸಿಡಿಇಎಕ್ಸ್) ಎಪ್‌ಎಮ್‌ಸಿ ನಿಯಂತ್ರಣದಡಿಯಲ್ಲಿ ಆದರೆ ನ್ಯಾಶನಲ್ ಸ್ಪಾಟ್ ಎಕ್ಸ್ಚೇಂಜ್ ಲಿಮಿಟೆಡ್ ಎಂಬ ಇನ್ನೊಂದು ವಿಧದ ಸಂಸ್ಥೆ ಇನ್ನೂ ಸರಕಾರದ ಇಲಾಖೆಯಡಿಯಲ್ಲಿಯೇ ಕೆಲಸ ಮಾಡುತ್ತಿರುವುದು.

ಸ್ಫಾಟ್‌ಎಕ್ಸ್ಚೇಂಜ್ ಸಂಸ್ಥೆ ಹೆಸರೇ ಸೂಚಿಸುವಂತೆ ಸ್ಪಾಟ್ ವಹಿಮಾಟುಗಳಿಗೆ ಮಾತ್ರ ಸೀಮಿತ. ಅಂದರೆ ಇಲ್ಲಿ ಬಹು ಅಪಾಯಕಾರಿ ಫಾರ್ವರ್ಡ್/ಫ್ಯೂಚರ್ಸ್ ವ್ಯವಹಾರ ನಡೆಯುವುದಿಲ್ಲ. ಸ್ಪಾಟ್ ವ್ಯವಹಾರ ಅಂದರೆ ಆ ಕೂಡಲೇ ಹಣ ಕೊಟ್ಟು ಆ ಕೂಡಲೇ ಸರಕಿನ ಡೆಲಿವರಿ ತೆಗೆದುಕೊಳ್ಳುವುದು. ಭವಿಷ್ಯದ ವ್ಯವಹಾರದಂತೆ ಈಗ ಕರಾರು ಮಾಡಿ ಭವಿಷ್ಯದ ಒಂದು ದಿನದಲ್ಲಿ ಕೊಡಕೊಳ್ಳುವುದಲ್ಲ. ಶಾರ್ಟ್ ಸೇಲ್ ಅಥವಾ ಇಲ್ಲದ ಸರಕನ್ನು ಮೊದಲು ಮಾರಿ ಆ ಬಳಿಕ ಕೊಳ್ಳುವುದನ್ನೂ ಮಾಡುವಂತಿಲ್ಲ. ಎನ್‌ಎಸ್‌ಇಎಲ್ ಇಂತಹ ಒಂದು ಸ್ಪಾಟ್ ಕಮಾಡಿಟಿ ಮಾರುಕಟ್ಟೆ; ಅದೂ ಕೂಡಾ ಧಾನ್ಯ, ಬೇಳೆ, ಸಾಂಬಾರ, ಚಿನ್ನ ಬೆಳ್ಳಿ, ತೈಲ ತಗಡುಗಳಿಗೆ ಮಾತ್ರ ಸೀಮಿತ. ಒಂದು ರೀತಿಯ ಯಾವುದೇ ಮಸಾಲವಿಲ್ಲದ ಸೀದಾ ಸಾದಾ ಪ್ಲೈನ್ ದೋಸಾ! ಹಾಗೂ ಇದಕ್ಕೆ ಸೆಬಿ, ಎಫ್‌ಎಮ್‌ಸಿ ಇತ್ಯಾದಿ ನಿಯಂತ್ರಕಗಳಿಲ್ಲ. ಇದು ಸರಕಾರದ ಕನ್ಸ್ಯೂಮರ್ ಅಫೇರ್ಸ್ ಇಲಾಖೆಯಡಿ ಬರುತ್ತದೆ. ಅದೇ ನೋಡಿ, ಸಮಸ್ಯೆ. ಬೇಕಾಬಿಟ್ಟಿ ಏನು ಮಾಡಿದರೂ ನಡೆಯುತ್ತದೆ. ಹಾಗೆಯೇ ನಡೆಯಿತು.

ನಡೆದದ್ದು ಏನು?

ಈ ಮಾರುಕಟ್ಟೆ ಕಳೆದ ಕೆಲ ವರ್ಷಗಳಿಂದಲೂ ಇವರಿಗೆ ಸ್ಪಷ್ಟ ಪರವಾನಿಗೆ ಇಲ್ಲದ ಹಲವು ದಿನಗಳ ಫಾರ್ವರ್ಡ್ ಕರಾರು ನೀಡುತ್ತಿತ್ತು. ಪೂರ್ತಿ ಪಾವತಿ ಮಾಡದೆ ಕೇವಲ ಮಾರ್ಜಿನ್ ಮನಿ ಕೊಟ್ಟು ಮಾಡುವ ಈ ವ್ಯವಹಾರದಲ್ಲಿ ಜಾಸ್ತಿ ದುಡ್ಡು ಜಾಸ್ತಿ ರಿಸ್ಕು. ಈ ಬಗ್ಗೆ ಹಲವರು ದೂರು ನೀಡಿದರೂ ಯಾವುದೇ ಕಡಿವಾಣ ಇರಲಿಲ್ಲ.

ಅಲ್ಲದೆ ಈ ಮಾರುಕಟ್ಟೆಯಲ್ಲಿ ಗಣನೀಯ ಪಾಲು ಶಾರ್ಟ್ ಸೆಲ್ ವ್ಯವಹಾರಗಳೂ ನಡೆಯುತ್ತಿದ್ದವು. ಪರವಾನಿಗೆಯೇ ಇಲ್ಲದೆ ಈ ರೀತಿ ಶಾರ್ಟ್ ಸೆಲ್ ಮಾಡುವುದು ಸ್ಪಾಟ್ ಮಾರುಕಟ್ಟೆಯ ನಿಯಮಾವಳಿಗೆ ವಿರುದ್ಧ.

ಅದೂ ಅಲ್ಲದೆ ಈ ಮಾರುಕಟ್ಟೆಯ ಬ್ರೋಕರುಗಳು ಜನರಿಂದ ೧೩%-೧೬% ಗ್ಯಾರಂಟಿ ಪ್ರತಿಫಲ ಎನ್ನುತ್ತಾ ಧನವಂತರಿಂದ ಭರಪೂರ ಹೂಡಿಕೆಯ ಹೊಳೆ ಹರಿಯಿಸಿ ಇಲ್ಲಿನ ಸಟ್ಟಾ ವ್ಯವಹಾರಕ್ಕೆ ಉತ್ತೇಜನ ನೀಡುತ್ತಿತ್ತು. ಒಬ್ಬ ರೈತನಿಗೆ ತನ್ನ ಸರಕನ್ನು ಈಗ ಮಾರಬೇಕು ಆದರೆ ಒಂದು ಕಂಪೆನಿಗೆ ಈಗ ತನ್ನ ದುಡ್ಡು ಬ್ಲೋಕ್ ಮಾಡಿಕೊಂಡು ಅದನ್ನು ಖರೀದಿಸಬೇಕಿಲ್ಲ. ಅಂತಹ ಸಂದರ್ಭಗಳಲ್ಲಿ ನೀವು ನಾವು ಅದನ್ನು ಒಂದೆಡೆ ಸ್ಪಾಟ್‌ನಲ್ಲಿ ಖರೀದಿಸಿ ಜೊತೆಜೊತೆಗೇ ಇನ್ನೊಂದೆಡೆ ಕಂಪೆನಿಗೆ ಬೇಕೆನಿಸುವ ಸಮಯಕ್ಕೆ – ೨೫, ೩೫ ದಿನಗಳು – ಭವಿಷ್ಯದಲ್ಲಿ ಮಾರುವ ಫಾರ್ವರ್ಡ್ ಕರಾರು ಮಾಡಿಕೊಳ್ಳಬಹುದು. ಈ ಫೈನಾನ್ಸಿಂಗ್ ಸೇವೆಗೆ ನಿಮಗೆ ೧೨%-೧೬% ಪ್ರತಿಫಲ ನೀಡಲಾಗುತ್ತದೆ. ಇಂತಹ ವ್ಯವಹಾರ ಕಾನೂನು ಬಾಹಿರ ಎಂದು ಹಲವರು ಅಂದರೆ ಇದಕ್ಕೆ ೨೦೦೮ರ ಸರಕಾರದ ಒಂದು ನೋಟಿಫಿಕೇಶನ್ ಅನುಮತಿ ನೀಡುತ್ತದೆ ಎಂದು ಕೆಲವರು ಸಮರ್ಥಿಸುತ್ತಾರೆ. ಇದು ಭವಿಷ್ಯದ ಕರಾರು ನಿಷೇಧದ ಕಣ್ತಪ್ಪಿಸಲು ವಿತ್ತಾಸುರರು ಮಾಡಿರುವ ಬೈಪಾಸ್ ಸರ್ಜರಿ! ಒಂದು ವಿಚಿತ್ರವಾದ ಕೊಡಕೊಳ್ಳುವ ಜಂಟಿ ಕರಾರು. ಇದನ್ನು ಧನವಂತರಿಗೆ ಸಂಯೋಜನೆ ಮಾಡಿಕೊಡುವವರು ಮಾರುಕಟ್ಟೆ ಕೃಪಾಪೋಷಿತ ಬೋಕರ್ ಸಮುದಾಯ. ಕ್ರಮೇಣ ಯಾವುದೇ ಸ್ಪಾಟ್‌ನಲ್ಲಿ ಯಾವುದೇ ಮಾಲು ಖರೀದಿಸದೆಯೇ ನೇರವಾಗಿ ಫಾರ್ವರ್ಡ್ ಸೇಲ್ ಕರಾರು ಆರಂಭವಾಯಿತು – ಮುಖ್ಯವಾಗಿ ಹರಳೆಣ್ಣು ಬೀಜ, ಉಣ್ಣೆ ನೂಲುಗಳಲ್ಲಿ. ಈ ರೀತಿಯ ಶಾರ್ಟ್ ಸೇಲ್ ಕಾನೂನುಬಾಹಿರ. ಈ ಕರ್ಮಕಾಂಡ ಹೇಗೆ ನಡೆಯಿತು ಎನ್ನುವುದರ ಸಂಪೂರ್ಣ ಕರಾಳರೂಪ ಮುಂದಿನ ದಿನಗಳ ತನಿಖೆಯಿಂದ ಹೊರಬರಬಹುದು; ಅಥವಾ ಬಾರದೇ ಇರಲೂ ಬಹುದು. ಅದು ನಮ್ಮ ಅದೃಷ್ಟ!

ಈ ರೀತಿ ನಿಯಂತ್ರಕಗಳ ಸುಪರ್ದಿ ಇಲ್ಲದೆ ದಿನಕ್ಕೆ ಒಂದ್ಸಾವ್ರ ಕೋಟಿ ವ್ಯವಹಾರ ಕುದುರಿಸುವ ಈ ಮಾರುಕಟ್ಟೆಯಲ್ಲಿ ಯಾವ ಕಾಳಸಂತೆಕೋರರು, ಯಾವ ಧೂರ್ತ ಪುಡಾರಿಗಳು ಎಷ್ಟೆಷ್ಟು ಬಾಚಿಕೊಂಡರೋ ಆ ಚಿತ್ರಗುಪ್ತನೇ ಅಲ್ಲ.

ಗುಡ್ ಮಾರ್ನಿಂಗ್, ಸರಕಾರ:

ಇದೀಗ ಕಳೆದ ಕೆಲ ತಿಂಗಳಿಂದ ತನ್ನ ಗಾಡ ನಿದ್ದೆಯಿಂದ ಎಬ್ಬಿಸಲ್ಪಟ್ಟ ಸರಕಾರ ಕಣ್ಣುಬಿಟ್ಟು ಹಲ್ಲುಜ್ಜಿ ಕಾಫಿ ಕುಡಿದು ಇದರ ವಿಚಾರಣೆಗೆ ಕೈ ಇಕ್ಕಿದೆ. ಜುಲೈ ೧೫ ರಂದು ಸ್ಪಾಟ್ ಅವಧಿಯನ್ನು ಮೀರುವ ಎಲ್ಲಾ ಹೊಸ ಕರಾರುಗಳನ್ನು ನಿಲ್ಲಿಸಲು ನೋಟೀಸು ನೀಡಿತು. ಅದಕ್ಕೆ ಉತ್ತರವಾಗಿ ಜುಲೈ ೨೩ ರಿಂದ ಆರಂಭಗೊಂಡಂತೆ ೧೦ ದಿನಗಳಿಗೆ ಮೀರಿದ ಫಾರ್ವರ್ಡ್ ಕರಾರುಗಳನ್ನು ಈ ಎಕ್ಸ್ಚೇಂಜ್ ನಿಲ್ಲಿಸಿತು. ಆದರೆ ಈ ಹೆಜ್ಜೆಯೇ ಈ ಮಾರುಕಟ್ಟೆಗೆ ಮುಳುವಾಯಿತು. ೧೦ ದಿನಗೊಳಗಿನ ಸೀದಾ ಸಾದಾ ಸ್ಪಾಟ್ ವ್ಯವಹಾರ ನಡೆಸಲು ಬಹುತೇಕ ಹೂಡಿಕೆದಾರರಿಗೆ ಆಸಕ್ತಿಯೇ ಇರಲಿಲ್ಲ. ಇಷ್ಟು ದಿನ ಈ ಮಾರುಕಟ್ಟೆ ನಳನಳಿಸಿದ್ದು ಆಸಕ್ತಿದಾಯಕ ಫಾರ್ವರ್ಡ್ ಕರಾರುಗಳ ಮೂಲಕವೇ. ಇದರಿಂದಾಗಿ ಹೂಡಿಕೆದಾರರು ಒಬ್ಬೊಬ್ಬರೇ ಮಾರುಕಟ್ಟೆಯಿಂದ ಹೊರಬರತೊಡಗಿದರು. ಈ ರೀತಿ ಮಾರುಕಟ್ಟೆಯಿಂದ ಗುಳೇ ಹೊರಟರೆ ವಿತ್ತಗುಳ್ಳೆ ಒಡೆಯಿತೆಂದೇ ಅರ್ಥ. ಒಂದು ಸಣ್ಣ ಭಾಗವಾದ ಮಾರ್ಜಿನ್ ಮನಿ ಮಾತ್ರ ಕೊಟ್ಟು ಇದೀಗ ಒಮ್ಮೆಲೇ ಪೂರ್ತಿ ಹಣ ಕೊಟ್ಟು ಡೆಲಿವರಿ ತಗೊಳ್ಳಿ ಅಥವಾ ಇರುವ ಡೀಲ್ ಅನ್ನು ಕ್ಲೋಸ್ ಮಾಡಿದಾಗ ಬರುವ ನಷ್ಟ ತುಂಬಿಕೊಳ್ಳಿ ಎನ್ನುವ ಪರಿಸ್ಥಿತಿ ಎದುರಾಗುತ್ತದೆ. ಪೇಯ್ಮೆಂಟ್ ಅಸಾಧ್ಯವಾಗುತ್ತದೆ. ಇದು ಇಡೀ ಮಾರುಕಟ್ಟೆಗೆ ಹರಡಿ ಎಲ್ಲರೂ ಪೆಟ್ಟು ತಿನ್ನುತ್ತಾರೆ.

ಸಧ್ಯದ ಸ್ಥಿತಿ:

ಹಾಗೆಯೇ ಈಗ ಪೇಯ್ಮೆಂಟ್ ಬಿಕ್ಕಟ್ಟು ತಲೆದೋರಿದೆ. ಜುಲೈ ೩೧ ರಂದು ಮಾರುಕಟ್ಟೆ ಇ-ಗೋಲ್ಡ್ ಇತ್ಯಾದಿ ಇ-ಸೀರೀಸ್ ಕರಾರುಗಳನ್ನು ಹೊರತುಪಡಿಸಿ ತನ್ನ ಎಲ್ಲಾ ವ್ಯವಹಾರಗಳನ್ನು ಬಂದ್ ಪಡಿಸಿತು. ಸುಮಾರು ರೂ ೫೫೦೦ ಕೋಟಿಯಷ್ಟು ಕೊಡಲಿರುವ ಹಣವನ್ನು ಬಾಕಿ ಇಟ್ಟು ಮೊದಲು ೧೫ ದಿನಗಳ ಮತ್ತು ಆ ಬಳಿಕ ಇದೀಗ ೫ ತಿಂಗಳುಗಳ ಸಮಯಾವಕಾಶ ಕೋರಿದೆ.

ಮುಂದೇನು?

ಕೆಳಕ್ಕೆ ಬಿದ್ದರೂ ಮೀಸೆಗೆ ಮಣ್ಣೇ ಆಗಲಿಲ್ಲ ಎನ್ನುವ ಧೋರಣೆಯೊಂದಿಗೆ ತನಗೆ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಬಾಕಿ ಮೊತ್ತಕ್ಕೂ ಆಧಾರವಾಗಿ ಸರಕಿನ ದಾಸ್ತಾನು ಇದೆ ಎನ್ನುವುದು ಸ್ಪಾಟ್ ಮಾರುಕಟ್ಟೆಯ ವಾದ. ಆದರೆ ಇವತ್ತಿನ ತಾರೀಖಿನಲ್ಲಿ ಯಾರೂ ಕೂಡಾ ಇದನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ಗೋಡೌನಿನಲ್ಲಿ ಇರುವುದು ಬರೇ ಬೊಗಳೆ ಮಾತ್ರ ಎನ್ನುತ್ತಾರೆ ಕೆಲವರು. ದುಡ್ಡು ಕೊಡಲು ಸಾಧ್ಯವಾಗದೆ ಮಾರುಕಟ್ಟೆ ಮುಳುಗಿದರೆ ಬ್ರೋಕರುಗಳೂ ಒಟ್ಟಿಗೆ ಹೂಡಿಕೆದಾರರೂ ಮುಳುಗಿದಂತೆಯೇ! ಇದೀಗ ಮಾರುಕಟ್ಟೆಯಲ್ಲಿ ಈ ಭೀತಿ ಎಲ್ಲರ ಮನದಲ್ಲೂ ಕೂತುಬಿಟ್ಟಿದೆ.

ಎರಡನೆಯದಾಗಿ ಈ ಹಣದ ಬಿಕ್ಕಟ್ಟು ಸ್ಪಾಟ್ ಮಾರುಕಟ್ಟೆಯಿಂದ ಹೊರಹರಿದು ಶೇರು ಮಾರುಕಟ್ಟೆಗೂ ಬಂದಿತೋ ಎನ್ನುವ ಹೆದರಿಕೆಯೂ ಸೆಬಿ ಸಹಿತ ಹಲವಾರು ಮಂದಿಗೆ ಇದೆ. ಸ್ಪಾಟ್ ಮತ್ತು ಶೇರು ಮಾರುಕಟ್ಟೆಗಳನ್ನು ಚೀನಾ ಗೋಡೆಯಂತೆ ಪ್ರತ್ಯೇಕ ಪ್ರತ್ಯೇಕವಾಗಿ ಇದಬೇಕೆಂಬ ಕಾನೂನು ಇದೆಯಾದರು ಈ ದೇಶದಲ್ಲಿ ಕಾನೂನು ಪಾಲನೆ ವ್ಯವಸ್ಥಿತವಾಗಿ ಆಗುತ್ತದೆ ಎನ್ನುವ ನಂಬಿಕೆ ಸ್ವತಃ ಕಾನೂನಿಗೇ ಇಲ್ಲ. ಈ ನಿಟ್ಟಿನಲ್ಲಿ ಈಗ ಸೆಬಿ ತನಿಖೆ ನಡೆಸುತ್ತಿದೆ.

ಸಾಕಪ್ಪಾ ಸಾಕು:

ಸರಕಾರದ ಕುಂಬಕರ್ಣ ನೀತಿಯಲ್ಲಿ ಲೋಭಿ ದುರ್ಜನರು ಯಾವ ರೀತಿ ಲೂಟಿ ಮಾಡುತ್ತಾರೆ ಎನ್ನುವುದಕ್ಕೆ ಇನ್ನೊಂದು ಸ್ಕಾಮ್ ಈಗ ತೆರೆದುಕೊಂಡಿದೆ. ಇದರ ಒಟ್ಟು ನಷ್ಟ ಮತ್ತು ನಾಶದ ಪೂರ್ಣ ಸ್ವರೂಪ ಇನ್ನೂ ಯಾರಿಗೂ ಅರಿವಿಲ್ಲ. ಮೇಲ್ನೋಟದ ಹಾವಳಿ ಕಾಣಿಸುತ್ತಿದೆ ಆದರೆ ಈ ನೆರೆಯಲ್ಲಿ ಇನ್ನೆಷ್ಟು ಕೊಚ್ಚಿಹೋಗುವುದೋ ಹೇಳಲಾಗದು.

ದಿನಾ ಬೆಳಗ್ಗೆ ಒಮ್ದು ಹೊಸ ಹಗರಣ ನೋಡಿ ರೊಸಿ ಹೋಗಿರುವ ನಮಗೆ ಇನ್ನದರೂ ಇಂತಹ ಸ್ಕಾಮುಗಳ ಸಹವಾಸ – ಸಾಕಪ್ಪಾ ಸಾಕು !!

 

ನಿಮ್ಮ ಟಿಪ್ಪಣಿ ಬರೆಯಿರಿ