ಶೇರು ಕ್ಲಾಸು-20 ಆಪ್ಷನ್ಸ್ ಟ್ರೇಡಿಂಗ್

Image

‘ಕೊಡುವ ಕೊಳ್ಳುವ ಆಯ್ಕೆ’- ‘ಆಪ್ಷನ್ಸ್ ಟ್ರೇಡಿಂಗ್’

ಕಳೆದ ವಾರ ಶೇರು ಡಿರೈವೇಟಿವ್ಸ್ ಬಗ್ಗೆ ಚರ್ಚೆ ಆರಂಭ ಮಾಡಿದ್ದೆ.

ಡಿರೈವೇಟಿವ್ ಅಂದರೆ ಮೂಲ ವ್ಯವಹಾರದಿಂದಲೇ ಹುಟ್ಟು ಪಡೆದಂತಹ ಆದರೆ ಅದಕ್ಕಿಂತ ಭಿನ್ನವಾದ ವ್ಯವಹಾರ- ತದ್ಭವ! ಶೇರು ಡಿರೈವೇಟಿವ್‌ಗಳಲ್ಲಿ ಫ್ಯೂಚರ್ಸ್ ಮತ್ತು ಆಪ್ಶನ್ಸ್ (Futures and Options) ಎಂಬ ಎರಡು ರೀತಿಯ ವ್ಯವಹಾರದ ಅವಕಾಶ ಇರುತ್ತದೆ. ಫ್ಯೂಚರ್ಸ್ ಬಗ್ಗೆ ಕಳೆದ ವಾರ ಬರೆದಿದ್ದೆ. ಈ ವಾರ ಆಪ್ಶನ್ಸ್ ಬಗ್ಗೆ ಮಾತನಾಡೋಣ:

ಆ ಪದವೇ ಸೂಚಿಸುವಂತೆ ಆಪ್ಷನ್ಸ್ ಟ್ರೇಡಿಂಗ್‌ನಲ್ಲಿ ನಮಗೆ ಒಂದು ಆಯ್ಕೆ ಇರುತ್ತದೆ. ಕರಾರು ಪ್ರಕಾರ ಕೊಳ್ಳುತ್ತೇವೆ ಎಂದು ಹೇಳಿದರೂ ಕೊಳ್ಳದಿರುವ ಆಯ್ಕೆ ಹಾಗೂ ಕೊಡುತ್ತೇನೆ ಎಂದು ಹೇಳಿದರೂ ಕೊಡದಿರುವ ಆಯ್ಕೆ!! – ಒಂದು ಸಣ್ಣ ತಪ್ಪು ದಂಡ (ಪ್ರೀಮಿಯಂ) ಕಟ್ಟಿ ಮಾಡಿಕೊಂಡ ಕರಾರಿನಿಂದ ಹೊರ ನಡೆಯುವ ಸೌಲಭ್ಯ. ಈ ವ್ಯವಹಾರ ಈ ಆಯ್ಕೆಯ ಕಾರಣದಿಂದಾಗಿಯೇ ಫ್ಯೂಚರ್ಸ್‌ಗಿಂತ ಭಿನ್ನ. ಫ್ಯೂಚರ್ಸ್‌ನಲ್ಲಿ ಈ ಆಯ್ಕೆ ಇರುವುದಿಲ್ಲ. ಫ್ಯೂಚರ್ಸ್ ‘ಕೊಡುವ ಕೊಳ್ಳುವ ಕರಾರು’ ಆದರೆ ಆಪ್ಷನ್ಸ್ ‘ಕೊಡುವ ಕೊಳ್ಳುವ ಆಯ್ಕೆ’!!

ಆಪ್ಶನ್ಸ್‌ಗಳಲ್ಲಿ ಎರಡು ವಿಧ – ಕಾಲ್ ಆಪ್ಷನ್ ಮತ್ತು ಪುಟ್ ಆಪ್ಶನ್ (Call Option and Put Option). ಕಾಲ್ ಆಪ್ಷನ್‌ನಲ್ಲಿ ಶೇರನ್ನು ಖರೀಧಿಸುವ ಆಯ್ಕೆ ಹಾಗೂ ಪುಟ್ ಆಪ್ಷನ್‌ನಲ್ಲಿ ಶೇರನ್ನು ಕೊಡುವ ಆಯ್ಕೆ. ಕಾಲ್ ಆಗಲಿ, ಪುಟ್ ಆಗಲಿ, ಪ್ರತಿಯೊಂದು ಕರಾರಿನಲ್ಲೂ ಒಬ್ಬ ಖರೀದಿಗಾರ ಹಾಗೂ ಒಬ್ಬ ಮಾರಾಟಗಾರನಿರುತ್ತಾನೆ. ಹಾಗೂ ಪ್ರತಿಯೊಂದು ಕರಾರೂ ಭವಿಷ್ಯತ್ತಿನ ಒಂದು ನಿಗಧಿತ ಬೆಲೆಗೆ (ಸ್ಟ್ರೈಕ್ ಪ್ರೈಸ್) ಹಾಗೂ ನಿಗಧಿತ ದಿನಾಂಕಕ್ಕೆ (Expiration ಡೇಟ್) ಹಾಗೂ ಒಂದು ನಿಗಧಿತ ಶುಲ್ಕಕ್ಕೆ (ಪ್ರೀಮಿಯಂ) ಮಾಡಲಾಗುತ್ತದೆ.

ಉದಾಹರಣೆಗೆ, ಜೂನ್ ೨೭ ರ ದಿನಾಂಕದ ರೂ ೧೨೫೦ ಕ್ಕೆ ರಿಲಾಯನ್ಸ್ ಶೇರನ್ನು ಕೊಂಡುಕೊಳ್ಳುವುದಾಗಿ ರೂ ೧೦೦ ಪ್ರೀಮಿಯಂ ಮುಂಗಡ ಕೊಟ್ಟು ರಾಮನು ಭೀಮನಿಂದ ಕಾಲ್ ಆಪ್ಷನ್ ಖರೀಧಿಸುತ್ತಾನೆ. ಜೂನ್ ೨೭ ರಂದು ರಿಲಾಯನ್ಸ್‌ನ ಮಾರುಕಟ್ಟೆ ಬೆಲೆ ೧೨೫೦ ರಿಂದ ಕೆಳಕ್ಕೆ ಇದ್ದರೆ ರಾಮನಿಗೆ ತನ್ನ ಕರಾರಿನಂತೆ ೧೨೫೦ ಕ್ಕೆ ಖರೀದಿಸುವ ಇಚ್ಛೆ ಇರುವುದಿಲ್ಲ. ತನ್ನ ಆಯ್ಕೆಯನ್ನು ಚಲಾಯಿಸಿ ಶೇರನ್ನು ಖರೀದಿಸದೇ ಹಾಗೇ ಬಿಟ್ಟು ತಾನು ಮುಂಗಡ ಕೊಟ್ಟ ರೂ ೧೦೦ ಪ್ರೀಮಿಯಂ ಅನ್ನು ಕಳೆದುಕೊಳ್ಳುತ್ತಾನೆ. ಕರಾರು ಸೇಲ್ ಮಾಡಿದ ಭೀಮನಿಗೆ ರೂ ೧೦೦ ಲಾಭವಾಗುತ್ತದೆ. ಒಂದು ವೇಳೆ ಜೂನ್ ೨೭ ರಂದು ರಿಲಾಯನ್ಸ್ ಬೆಲೆ ೧೬೦೦ ಇದ್ದಲ್ಲಿ ರಾಮನು ತನ್ನ ಖರೀದಿಸುವ ಆಯ್ಕೆಯನ್ನು ಚಲಾಯಿಸಿ ಶೇರನ್ನು ಭೀಮನಿಂದ ೧೨೫೦ ಕೊಟ್ಟು ಖರಿಧಿಸುತ್ತಾನೆ. ಆ ಸಂದರ್ಭದಲ್ಲಿ ರಾಮನಿಗೆ ೧೬೦೦-೧೨೫೦-೧೦೦ = ರೂ ೨೫೦ ಲಾಭವಾಗುತ್ತದೆ. ಭೀಮನಿಗೆ ೧೨೫೦+೧೦೦=೧೩೫೦ ಸಿಗುತ್ತದೆ. ಆದರೆ ಮಾರುಕಟ್ಟೆ ಬೆಲೆ ಈಗ ೧೬೦೦ ಇರುವುದರಿಂದ ಆತನಿಗೆ ೧೬೦೦-೧೩೫೦=೨೫೦ ನಷ್ಟವಾಗುತ್ತದೆ. ಇದು ಕಾಲ್ ಆಪ್ಷನ್‌ಗೆ ಒಂದು ಉದಾಹರಣೆ.

ಪುಟ್ ಆಪ್ಷನ್ ಇದರ ತದ್ವಿರುದ್ಧ ಗತಿಯಲ್ಲಿ ನಡೆಯುತ್ತದೆ. ಉದಾಹರಣೆಗೆ, ಜೂನ್ ೨೭ ರ ದಿನಾಂಕದ ರೂ ೧೨೫೦ ಕ್ಕೆ ರಿಲಾಯನ್ಸ್ ಶೇರನ್ನು ಸೇಲ್ ಮಾಡುವುದಾಗಿ ರೂ ೧೦೦ ಪ್ರೀಮಿಯಂ ಮುಂಗಡ ಕೊಟ್ಟು ರಾಮನು ಭೀಮನಿಂದ ಪುಟ್ ಆಪ್ಷನ್ ಖರೀದಿಸುತ್ತಾನೆ. ಜೂನ್ ೨೭ ರಂದು ರಿಲಾಯನ್ಸ್‌ನ ಮಾರುಕಟ್ಟೆ ಬೆಲೆ ೧೨೫೦ ರಿಂದ ಮೇಲೆ ಇದ್ದರೆ ರಾಮನಿಗೆ ತನ್ನ ಕರಾರಿನಂತೆ ಕೊಡುವ ಇಚ್ಛೆ ಇರುವುದಿಲ್ಲ. ತನ್ನ ಆಯ್ಕೆಯನ್ನು ಚಲಾಯಿಸಿ ಶೇರನ್ನು ಕೊಡದೆ ಹಾಗೇ ಬಿಟ್ಟು ತಾನು ಮುಂಗಡ ಕೊಟ್ಟ ರೂ ೧೦೦ ಪ್ರೀಮಿಯಂ ಅನ್ನು ಕಳೆದುಕೊಳ್ಳುತ್ತಾನೆ. ಕರಾರು ಸೇಲ್ ಮಾಡಿದ ಭೀಮನಿಗೆ ರೂ ೧೦೦ ಲಾಭವಾಗುತ್ತದೆ. ಒಂದು ವೇಳೆ ಜೂನ್ ೨೭ ರಂದು ರಿಲಾಯನ್ಸ್ ಬೆಲೆ ೯೦೦ ಇದ್ದಲ್ಲಿ ರಾಮನು ತನ್ನ ಸೇಲ್ ಮಾಡುವ ಆಯ್ಕೆಯನ್ನು ಚಲಾಯಿಸಿ ಶೇರನ್ನು ಭೀಮನಿಂದ ೯೦೦ ಕೊಟ್ಟು ಖರೀದಿಸುತ್ತಾನೆ. ಆ ಸಂದರ್ಭದಲ್ಲಿ ರಾಮನಿಗೆ ೧೨೦೦-೯೦೦-೧೦೦ = ರೂ ೨೦೦ ಲಾಭವಾಗುತ್ತದೆ. ಭೀಮನಿಗೆ ೯೦೦+೧೦೦=೧೦೦೦ ಸಿಗುತ್ತದೆ. ಆದರೆ ಮಾರುಕಟ್ಟೆ ಬೆಲೆ ೯೦೦ ಇರುವುದರಿಂದ ಆತನಿಗೆ ೧೨೦೦-೯೦೦-೧೦೦= ೨೦೦ ರೂ ನಷ್ಟವಾಗುತ್ತದೆ. ಇದು ಪುಟ್ ಆಪ್ಷನ್‌ಗೆ ಒಂದು ಉದಾಹರಣೆ.

ಇದರಲ್ಲಿ ಗಮನಿಸ ಬೇಕಾದ ಮುಖ್ಯ ಅಂಶವೆಂದರೆ, ಕಾಲ್ ಆಗಲಿ ಪುಟ್ ಆಗಲಿ, ಯಾವುದೇ ಆಪ್ಷನ್‌ನಲ್ಲಿ ಆಪ್ಷನ್ ಖರೀಧಿಸಿದವನಿಗೆ ನಷ್ಟವು ಕೊಟ್ಟ ಪ್ರೀಮಿಯಂಗೆ ಸೀಮಿತವಾಗಿದ್ದು ಲಾಭವು ಮಿತಯಿಲ್ಲದಾಗಿರುತ್ತದೆ. ಆಪ್ಷನ್ ಸೇಲ್ ಮಾಡಿದವನಿಗೆ ಯಾವತ್ತೂ ಅದರ ತದ್ವಿರುದ್ಧ, ಅಂದರೆ ಲಾಭವು ಪಡಕೊಂಡ ಪ್ರೀಮಿಯಂಗೆ ಸೀಮಿತವಾಗಿರುತ್ತದೆ ಹಾಗೂ ನಷ್ಟವು ಮಿತಿಯಿಲ್ಲದಾಗಿರುತ್ತದೆ. ಅಂದರೆ, ಆಪ್ಷನ್ ಖರೀದಿಸುವುದು ಯಾವತ್ತೂ ಕನಿಷ್ಟ ರಿಸ್ಕ್ ಹೊಂದಿದ್ದಾಗಿದ್ದು, ಆಪ್ಷನ್ ಸೇಲ್ ಮಾಡುವುದು ಗರಿಷ್ಟ ರಿಸ್ಕ್ ಹೊಂದಿದ್ದಾಗಿರುತ್ತದೆ. ಇದನ್ನು ಚೆನ್ನಾಗಿ ಅರಿತು ಆಪ್ಶನ್ಸ್‌ಗೆ ಕೈಯಿಕ್ಕುವುದು ಉಚಿತ.

ಆಪ್ಷನ್ ಟ್ರೇಡಿಂಗ್ ಅನ್ನು ಜೂಜಾಟದಂತೆ ಶೇರು ಬೆಲೆಯ ಊಹಾಪೋಹಕ್ಕೆ (Speculation) ಉಪಯೋಗಿಸುವ ಬದಲು, ಭವಿಷ್ಯತ್ತಿನಲ್ಲಿ ಸಿಗಬೇಕಾದ ಶೇರು ಬೆಲೆಗೆ ಒಂದು ವಿಮೆಯಿಳಿಸಿದಂತೆ (Hedging) ಉಪಯೋಗಿಸುವುದುತ್ತಮ.

ನಿಮ್ಮ ಟಿಪ್ಪಣಿ ಬರೆಯಿರಿ