ಕಾಕು-201 ಒಬಾಮಾಕೇರ್‌ಗೆ ಡೋಂಟ್ ಕೇರ್; ಗೂಡು ಮುಚ್ಚಿದ ಅಮೆರಿಕನ್ ಸರಕಾರ

ಅಮೇರಿಕಾದಲ್ಲಿ ಕಳೆದ ವಾರ ಆರಂಭಗೊಂಡ ಈ ಹೊಸ ನೌಟಂಕಿ ನಮ್ಮ ಗುರುಗುಂಟಿರಾಯರಿಗೆ ಅರ್ಥವೇ ಆಗಲಿಲ್ಲ. ‘ಅಲ್ಲಾ, ಅದೆಂತದ್ದು ಕತೆ ಮಾರಾಯ್ರೇ, ನಮ್ಮ ಊರಿನ ಗೂಡಣ್ಣ ತನ್ನ ಗೂಡಂಗಡಿ ಮುಚ್ಚಿ ಮನೆಗೆ ಹೋದ ಹಾಗೆ, ಶೆಟ್ಟರಂಗಡಿಯ ಶೆಟ್ರು ಶಟ್ಟರ್ ಎಳೆದು ಹೋದ ಹಾಗೆ ಓಬಾಮಣ್ಣ ಕೂಡಾ ತನ್ನ ಗೌರ್ನ್‌ಮೆಂಟಿನ ಗೂಡು ಮುಚ್ಚಿ ಮನೆಯತ್ತ ನಡೆದದ್ದು ಅಂದ್ರೆ ಎನರ್ಥ? ಯಾವುದೇ ಶೆಟ್ರ ಅಂಗಡಿಯ ಶಟ್ಟರ್ ಆದ್ರೂ ಒಂದೆರಡು ದಿನದಿಂದ ಜಾಸ್ತಿ ಮುಚ್ಚಿ ಇರೋದೇ ಇಲ್ಲ ಅಲ್ವ? ಹಾಗೆ ಮುಚ್ಚಿದ್ರೆ ಜೀವನದ ಗತಿ ಏನು ಸ್ವಾಮೀ? ಆದ್ರೆ ಇಲ್ಲಿ ನೋಡಿದರೆ, ಗಡ್ದಿಗೆ ತನ್ನ ಗೌರ್ನ್‌ಮೆಂಟು ಬಂದ್ ಮಾಡಿದ ಒಬಾಮ ಒಂದು ವಾರ ಆದರೂ ಓಬವ್ವನಂತೆ ಒನಕೆ ಹಿಡ್ಕೊಂಡು ಅಚಲನಾಗಿ ನಿಂತೇ ಬಿಟ್ಟಿದಾನೆ.

ನಮ್ಮ ದೇಶದಲ್ಲಿ ಯಾವ್ಯಾವುದೋ ರಾಜಕೀಯ ನಾಟಕಗಳನ್ನು ನೋಡಿ ಜೀರ್ಣಿಸಿಕೊಂಡ ಗುರುಗುಂಟಿರಾಯರಿಗೆ ಈ ನಾಟಕ ನೋಡಿ ಸ್ವಲ್ಪ ನೆಮ್ಮದಿಯೆನಿಸಿತು. ರಾಜಕೀಯ ಕಾರಣಗಳಿಗೆ ದೇಶವನ್ನು ಒತ್ತೆಯಿಟ್ಟು ನಾಯಿ ತರ ಕಚ್ಚಾಡುವುದು ನಮ್ಮ ಭಾರತದ ಜುಜುಬಿ ರಾಜಕೀಯದಲ್ಲಿ ಮಾತ್ರ ನಡೆಯುವುದಲ್ಲ; ಅದನ್ನು ಅಮೇರಿಕಾದಂತ ಅಮೇರಿಕಾ ದೇಶವೇ ಮಾಡಬಹುದು ಅಂದ ಮೇಲೆ ನಮ್ಮ ಮೇಲೆ ನಾವೇ ತುಸು ಹೆಮ್ಮೆ ಪಟ್ಟುಕೊಳ್ಳಬಹುದು ಅಲ್ಲವೇ? ಮರ್ಯಾದಸ್ಥರು ಮಾಡಬಾರದ ಕೆಲವನ್ನೇನೂ ನಮ್ಮ ಪುಡಾರಿಗಳು ಮಾಡಿತ್ತಿಲ್ಲವೆಂಬುದು ಖಾತ್ರಿಯಾಯಿತು. ೯/೧೧ ಸಂದರ್ಭದಲ್ಲಿ ಕೆಲವು ಭಾರತೀಯರು ಅನುಭವಿಸಿದ ವಿಚಿತ್ರ ಖುಶಿಯನ್ನು ರಾಯರು ಈಗ ಅನುಭವಿಸಿದರು.

ಬಜೆಟ್ ಬಿಕ್ಕಟ್ಟು:

ನಮ್ಮಲ್ಲಿ ಎಪ್ರಿಲ್ ೧ ರಿಂದ ಒಂದು ಬಜೆಟ್ ವರ್ಷ ಆರಂಭವಾಗುವಂತೆ ಅಮೇರಿಕಾದಲ್ಲಿ ಅಕ್ಟೋಬರ್ ೧ ರಿಂದ ಹೊಸ ಬಜೆಟ್ ವರ್ಷ ಆರಂಭವಾಗುತ್ತದೆ. ಅಕ್ಟೋಬರ್ ೧ ನೆಯ ತಾರೀಖಿನ ಮೊದಲೇ ಬಜೆಟ್ ಅಥವಾ ಆಯ-ವ್ಯಯ ಪತ್ರ ಮಂಜೂರು ಆಗದಿದ್ದಲ್ಲಿ ಸರಕಾರಕ್ಕೆ ಒಂದು ಡಾಲರ್ ಕೂಡಾ ವೆಚ್ಚ ಮಾಡಲು ಅಧಿಕಾರ ಇರುವುದಿಲ್ಲ. ಸರಕಾರಕ್ಕೆ ತನ್ನ ಖರ್ಚುಗಳನ್ನು ಮಾಡಲು ಅಧಿಕಾರ ಸಿಗುವುದೇ ಬಜೆಟ್ಟಿನ ಮೂಲಕ.

ಈ ಬಾರಿ ಅಮೇರಿಕಾದಲ್ಲಿ ಅಕ್ಟೋಬರ್ ೧ ನೆಯ ತಾರೀಖಿನ ಮೊದಲು ಬಜೆಟ್ ಮಂಜೂರು ಆಗಲಿಲ್ಲ. ಡೆಮಾಕ್ರಾಟಿಕ್ ಸರಕಾರ ಮಂಡಿಸಿದ ಬಜೆಟ್ಟಿನ ಅತ್ಯಂತ ಮುಖ್ಯ ಅಂಶವಾದ ‘ಒಬಾಮಾಕೇರ್’ ಎಂಬ ಸರ್ವರಿಗೂ ಆರೋಗ್ಯ ರಕ್ಷೆ ನೀಡುವ ಪ್ರಸ್ತಾಪಕ್ಕೆ ವಿರೋಧಪಕ್ಷವಾದ ರಿಪಬ್ಲಿಕನ್ಸ್ ತೀವ್ರ ವಿರೋಧ ತೋರಿಸಿ ಬಜೆಟ್ ಪತ್ರದ ಮಂಜೂರಾತಿಗೆ ಸುತಾರಾಂ ಒಪ್ಪಿಗೆ ಕೊಡಲಿಲ್ಲ. ವಾಸ್ತವದಲ್ಲಿ ಕಳೆದ ೩ ವರ್ಷಗಳಿಂದ ಒಬಾಮಾನ ಈ ಆರೊಗ್ಯ ರಕ್ಷಾ ಯೋಜನೆ ತೀವ್ರವಾದ ರಾಜಕೀಯ ವಿರೋಧವನ್ನು ಸೃಷ್ಟಿಸಿದ್ದು ಆತನ ಚುನಾವಣೆಯ ಸಮಯದಲ್ಲೂ ಅದೊಂದು ಮುಖ್ಯ ಭೂಮಿಕೆಯಾಗಿತ್ತು.

ಒಬಾಮಾಕೇರ್ ಎಂದೇ ಪತ್ರಿಕೆಗಳಿಂದ ನಾಮಾಂಕಿತ ಈ ಯೋಜನೆಯಲ್ಲಿ ದೇಶದ ಎಲ್ಲಾ ನಾಗರಿಕರೂ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯ ವಿಮೆಯ ಯೋಜನೆಯಡಿಯಲ್ಲಿ ಬರುವಂತಹ ಅವಕಾಶವನ್ನು ಕಲ್ಪಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಮಂದಿ ತಮ್ಮ ಉದ್ಯೋಗದ ನಿಮಿತ್ತ ಆರೋಗ್ಯ ವಿಮೆಯ ಸೌಲಭ್ಯವನ್ನು ಅನುಭವಿಸುತ್ತಿದ್ದರೆ ವೃದ್ಧರು ಹಾಗೂ ಬಡವರು ಸರಕಾರದ ಅನುದಾನದಿಂದ ಆರೋಗ್ಯ ರಕ್ಷಣೆ ಪಡೆಯುತ್ತಿದ್ದಾರೆ. ಆದರೂ ಸಮಾಜದ ಒಂದು ವರ್ಗದ ಜನರು ದುಬಾರಿ ವೆಚ್ಚದ ಚಿಕಿತ್ಸಾ ಸೌಲಭ್ಯಗಳನ್ನು ಪಡಕೊಳ್ಳಲು ಯಾವುದೇ ವಿಮೆಯ ಆಶ್ರಯವಿಲ್ಲದೆ ಹೆಣಗಾಡುತ್ತಾ ಇದ್ದಾರಂತೆ. ಅಂತವರಿಗೆ ಸರಕಾರವೇ ತನ್ನ ಬೊಕ್ಕಸದಿಂದ ವಿಮಾ ಮೊತ್ತವನ್ನು ನೀಡಿ ಸಲಹಬೇಕೆನ್ನುವುದು ಒಬಾಮಾ ನಿಲುವು. ಈ ಹೆಜ್ಜೆ ಸರಕಾರದ ವೆಚ್ಚವನ್ನೂ ಹೆಚ್ಚಿಸಿ ದಿವಾಳಿಯಾಗಿಸೀತು, ಆರ್ಥಿಕವಾಗಿ ದೇಶಕ್ಕೊಂದು ಹೊರೆಯಾದೀತು ಎನ್ನುವುದು ವಿರೋಧ ಪಕ್ಷದ ನಿಲುವು. ಚುನಾವಣಾ ಸಮಯದಿಂದಲೇ ಯುದ್ಧಭೂಮಿಗೆ ಇಳಿದಿರುವ ಈ ಜಗ್ಗಾಟ ಯಾವುದೇ ಪರಿಹಾರವಿಲ್ಲದೆ ಯಾವುದೇ ಸಂಧಾನವಿಲ್ಲದೆ ಬಜೆಟ್ ಹಂತದಲ್ಲಿ ಬಂದು ನಿಂತು ಒಂದಿಡೀ ಸರಕಾರವನ್ನೇ ಸ್ಥಗಿತಗೊಳಿಸಿದೆ.

‘ನೀ ಕೊಡೆ-ನಾ ಬಿಡೆ’ ಎನ್ನುತ್ತಾ ದೃಷ್ಠಿ ಯುದ್ಧಕ್ಕೆ ಬಂದು ನಿಂತ ಆಡಳಿತ (ಡೆಮೋಕ್ರಾಟ್ಸ್) ಹಾಗೂ ವಿರೋಧ ಪಕ್ಷ (ರಿಪಬ್ಲಿಕನ್ಸ್) ಗಳಲ್ಲಿ ಮೊತ್ತ ಮೊದಲು ಯಾರು ಕಣ್ಣು ಪಿಳುಕಿಸುತ್ತಾರೆ ಎನ್ನುವುದನ್ನು ಇದೀಗ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಕಳೆದ ಮಂಗಳವಾರ ಆರಂಭಗೊಂಡ ಈ ದೃಷ್ಠಿ ಯುದ್ಧಕ್ಕೆ ಇವತ್ತಿಗೆ ಅಮೋಘ ೭ ನೇ ದಿನ!

ಪರಿಣಾಮ:

ಅಕ್ಟೋಬರ್ ೧ ರಿಂದ ಆರಂಭಗೊಂಡಂತೆ ಸರಕಾರಕ್ಕೆ ಖರ್ಚು ಮಾಡುವ ಅಧಿಕಾರ ಇಲ್ಲದ ಕಾರಣ ರಕ್ಷಣಾ ಖಾತೆ, ಆರೋಗ್ಯ ಮತ್ತಿತರ ಅತ್ಯಗತ್ಯದ ವಿಭಾಗಗಳನ್ನು ಬಿಟ್ಟು ಬೇರೆಲ್ಲಾ ವಿಭಾಗಗಳನ್ನು ಬಂದ್ ಮಾಡಲಾಗಿದೆ. ಸುಮಾರು ೧೦ ಲಕ್ಷ ಸರಕಾರಿ ಸಿಬ್ಬಂದಿಗಳನ್ನು ಸಂಬಳರಹಿತವಾಗಿ ಮನೆಗೆ ಕಳುಹಿಸಲಾಗಿದೆ. ಸರಕಾರದ ಎಷ್ಟೋ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಕ್ಕೆ ಬಂದು ನಿಂತಿವೆ. ಆಮದು ರಫ್ತು ಸಹಿತ ವಿದೇಶಿ ವ್ಯವಹಾರವೂ ನಿಂತುಬಿಟ್ಟಿದೆ. ಇದು ಅಮೇರಿಕಾದ ಅಭಿವೃದ್ಧಿಯನ್ನು ಕುಂಠಿತಗೊಳಿಸುವುದರಲ್ಲಿ ಸಂಶಯವಿಲ್ಲ.

ತಾರ್ಕಿಕವಾಗಿ ನೋಡಹೋದರೆ ಈ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಮೇರಿಕಾದ ಶೇರುಗಟ್ಟೆ ಹಾಗೂ ಡಾಲರ್ ಮೌಲ್ಯ ತೀವ್ರವಾದ ಕುಸಿತವನ್ನು ಕಾಣಬೇಕು. ಆದರೆ ಅಮೇರಿಕಾದಲ್ಲಿ ಈ ರೀತಿಯ ರಾಜಕೀಯ ನಾಟಕ ನಡೆದದ್ದು ಇದುವೇ ಮೊದಲೇನಲ್ಲ. ಹಲವು ಬಾರಿ ಈ ರೀತಿ ನಡೆದಿದ್ದು ಕೆಲವೇ ದಿನಗಳಲ್ಲಿ ಒಂದಲ್ಲ ಒಂದು ರಾಜಕೀಯ ಪರಿಹಾರ ಕಂಡಿದ್ದು ವಹಿವಾಟು ಮಾಮೂಲಿನ ಹಾದಿ ಹಿಡಿದದ್ದಿದೆ. ಆ ಕಾರಣಕ್ಕಾಗಿಯೇ ಯಾವುದೇ ಊಹಾತ್ಮಕ ಹೂಡಿಕೆದಾರರು ಈ ಬಾರಿ ಗಂಭೀರವಾದ ನಿರಾಶೆಯ ನಿಲುವನ್ನು ಈವರೆಗೆ ತಳೆದಿಲ್ಲ. ಶೇರು ಮತ್ತು ಡಾಲರ್ ಕಟ್ಟೆಗಳನ್ನು ಕರಡಿಗಳು ಕೆಳಕ್ಕೆ ದಬ್ಬಿ ರಕ್ತ ಹರಿಸಿಲ್ಲ. ನಿಧಾನವಾಗಿ ಸ್ವಲ್ಪ ಮಟ್ಟಿಗೆ ಈ ಬಿಕ್ಕಟ್ಟು ಶೇರು, ಕರೆನ್ಸಿ ಹಾಗೂ ಕಮಾಡಿಟಿ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತಲಿದೆ.

ಆದರೆ ಇದು ಯಾವ ಸಮಯಕ್ಕೂ ಉಲ್ಬಣಗೊಳ್ಳಬಹುದು. ದಿನಗಳೆದಂತೆಲ್ಲಾ ಜನರ ನಿರೀಕ್ಷೆ ಸಡಿಲವಾದಂತೆಲ್ಲಾ ಆರ್ಥಿಕ ಬಿಕ್ಕಟ್ಟು ಜಾಸ್ತಿಯಾದಂತೆಲ್ಲಾ ಮಾರುಕಟ್ಟೆಯ ಮೇಲೆ ಕೆಟ್ಟ ಪ್ರಭಾವ ಗಾಡವಾಗಿ ತಟ್ಟಬಹುದು. ಈ ಊಹೆಯಲ್ಲಿ ಡಾಲರ್ ವಿರುದ್ಧ ರುಪಾಯಿ ಈಗಾಗಲೇ ಚೇತರಿಸಿಕೊಂಡಿದೆ. ನಮ್ಮ ಶೇರುಕಟ್ಟೆಯೂ ಬಾಂಡುಕಟ್ಟೆಯೂ ಸ್ವಲ್ಪ ಮಟ್ಟಿಗೆ ಉತ್ತೇಜನ ಪಡಕೊಂಡಿದೆ.

ಈ ವಾರ ಅಮೇರಿಕಾದಲ್ಲಿ ಯಾವ ರೀತಿ ಹವಾಮಾನ ರೂಪುಗೊಳ್ಳುತ್ತದೆ ಎನ್ನುವುದನ್ನು ಹೊಂದಿಕೊಂಡು ನಮ್ಮ ರುಪಾಯಿ ಮತ್ತು ದಲ್ಲಾಲ್ ಬೀದಿ ತನ್ನ ಸ್ವರೂಪ ಪ್ರದರ್ಶಿಸಲಿದೆ. ಅಲ್ಲಿ ಬಿಕ್ಕಟ್ಟು ಜಾಸ್ತಿಯಾದಂತೆ ನಮ್ಮ ಮಾರುಕಟ್ಟೆಗಳಿಗೆ ಒಳ್ಳೆಯದು. ಅಲ್ಲಿ ಸಮಸ್ಯೆ ಬಗೆಹರಿದಂತೆ ನಮ್ಮ ಮಾರುಕಟ್ಟೆಗಳು ಪುನಃ ಕೆಳಕ್ಕೆ ಇಳಿದೀತು. ಇದು ಅಲ್ಪಕಾಲಿಕ ದೃಷ್ಟಿಯಲ್ಲಿ ನಮ್ಮ ದೇಶದ ಮೇಲೆ ಬೀರಲಿರುವ ಪರಿಣಾಮ.

ಆದರೆ ದೀರ್ಘಕಾಲಿಕ ದೃಷ್ಟಿಯಿಂದ ಇದು ಜಾಸ್ತಿ ಉಪಕಾರಿಯಾಗದು. ವಾಲಿಯಂತೆ ವೈರಿಯ ಅರ್ಧ ಶಕ್ತಿ ಹೀರಿ ಮೇಲೇರುವ ತಾಕತ್ತು ನಮ್ಮ ದೇಶಕ್ಕೆ ಇಲ್ಲ. ಒಂದು ಹಂತದ ಬಳಿಕ ಕೇವಲ ಅಮೇರಿಕಾದ ಇಳಿತದಲ್ಲಿಯೇ ನಾವು ಏರುತ್ತಾ ಹೋಗಲಾರೆವು. ಅಮೇರಿಕಾದ ಬಿಸಿನೆಸ್ ನಿಲುಗಡೆಯಾದಲ್ಲಿ ನಮ್ಮ ರಫ್ತು ಕೂಡಾ ಕುಸಿತಗೊಂಡು ರುಪಾಯಿ ಮತ್ತು ಮಾರುಕಟ್ಟೆಗಳ ಮೇಲೆ ಒದೆತ ಬಿದ್ದೀತು. ಅಮೇರಿಕಾದಲ್ಲಿ ಸರಕಾರದ ಖರ್ಚು ಇಲ್ಲದ ಕಾರಣ ಹಣಕಾಸಿನ ಅಭಾವ ಉಂಟಾದಂತೆಲ್ಲಾ ಡಾಲರ್ ಮೇಲಿನ ಬಡ್ಡಿ ದರ ಅಲ್ಲಿ ಏರೀತು. ಹಾಗಾದರೆ ಅಮೇರಿಕಾದ ಕಂಪೆನಿಗಳು ನಮ್ಮಲ್ಲಿನ ಹೂಡಿಕೆಗಳನ್ನು ಮಾರಿ ತವರೂರಿಗೆ ಗಾಡಿ ಕಟ್ಟುವುದು ನಿಶ್ಚಿತ. ಇಂತಹ ಸಮಸ್ಯೆ ಇಡೀ ಜಗತ್ತನ್ನೇ ಕಾಡಲಿದೆ. ಅದಕ್ಕಾಗಿ ಎಲ್ಲಾ ದೇಶದವರೂ ಉಸಿರು ಬಿಗಿಹಿಡಿತ ತಮ್ಮ ತಮ್ಮ ರಾಷ್ಟ್ರೀಯ ದೈವದ ಬಳಿ ‘ಹಾಗಾದದಿರಲಿ ಓ ದೇವರೇ’ ಎಂದು ನೈವೇದ್ಯ ನೀಡಿ ಹರಕೆ ಹೊರುತ್ತಿದ್ದಾರೆ.

ಅಂತೂ ಇಂತೂ ಗ್ಲೋಬಲೀಕರಣದ ಈ ಜಗತ್ತಿನಲ್ಲಿ ಪ್ರತಿ ಬಾರಿ ಅಮೇರಿಕಾಕ್ಕೆ ಶೀತ ಹಿಡಿದಾಗಲೂ ಜ್ವರದಿಂದ ನಾವುಗಳು ನಡುಗುವುದು ನಮ್ಮ ಅನಿವಾರ್ಯ ಪ್ರಾರಬ್ಧವಾಗಿದೆ. ಗೋಬಲೀಕರಣವನ್ನು ಅಪ್ಪಿಕೊಳ್ಳಲು ಆತುರ ತೋರಿದ ನಾವುಗಳು ಅದರೊಂದಿಗೆ ಬಾಳ್ವೆ ಮಾಡುವುದು ಹೇಗೆ ಎಂಬುದನ್ನು  ಕಲಿತಿಲ್ಲ. ಆರ್ಥಿಕವಾಗಿ ನಾವು ಬಲಿಷ್ಟವಾಗದೆ ಈ ರೋಗದಿಂದ ನಮಗೆ ಮುಕ್ತಿ ಇಲ್ಲ. ಆದರೆ ಜಾತೀಯತೆ, ಧರ್ಮಾಂಧತೆ, ಭ್ರಷ್ಟಾಚಾರ, ಆತ್ಮವಂಚನೆ, ಒಳಜಗಳಗಳಿಂದ ತುಂಬಿ ತುಳುಕುತ್ತಿರುವ ನಮಗೆ ಸಧ್ಯಕ್ಕೆ ಆರ್ಥಿಕ ಬಲಿಷ್ಟತೆಯ ಬಗ್ಗೆ ಯೋಚಿಸಲು ಸಮಯವಿಲ್ಲ.

ನಿಮ್ಮ ಟಿಪ್ಪಣಿ ಬರೆಯಿರಿ